ಜಿಲ್ಲೆ

ತುಮಕೂರು ಎಪಿಎಂಸಿಯಲ್ಲಿ ಸೋಂಕು ನಿವಾರಕ ಸುರಂಗ ಮಾರ್ಗ

ತುಮಕೂರು: ಅಂತರಸನಹಳ್ಳಿ ಎಪಿಎಂಸಿ ಹಣ್ಣು, ಹೂವು ಮತ್ತು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಪಾಲಿಕೆ ವತಿಯಿಂದ ಸೋಂಕು ನಿವಾರಕ ಸುರಂಗ ಮಾರ್ಗ ಸ್ಥಾಪಿಸಲಾಗಿದೆ. ಮೇಯರ್ ಫರೀದಾಬೇಗಂ, ಆಯುಕ್ತ ಟಿ.ಭೂಬಾಲನ್ ‘ಸುರಂಗ ಮಾರ್ಗ’ಕ್ಕೆ ಭಾನುವಾರ ಚಾಲನೆ ನೀಡಿದರು.

ಸೋಂಕು ನಿವಾರಕ ಸುರಂಗ ಮಾರ್ಗದ ಮೂಲಕ ಮಾರುಕಟ್ಟೆ ಪ್ರವೇಶಿಸಿದರೆ ಸ್ಯಾನಿಟೈಸರ್ ಮಿಶ್ರಿತ ದ್ರಾವಣ ಮೈಮೇಲೆ ಸಿಂಪಡಣೆಯಾಗಿ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರೂ ಸುರಂಗ ಮಾರ್ಗದಿಂದಲೇ ಓಡಾಡಬೇಕಿದೆೆ. ಹಾಗಾಗಿ, ಮಾರುಕಟ್ಟೆಯಿಂದ ಯಾವುದೇ ರೀತಿಯ ಸೋಂಕು ಹರಡುವ ಭಯವಿಲ್ಲದೆ ನೆಮ್ಮದಿಯಾಗಿ ಮನೆಗೆ ತೆರಳಬಹುದು ಎಂದು ಮೇಯರ್ ಫರೀದಾಬೇಗಂ ಹೇಳಿದರು.

ತರಕಾರಿ ಮಾರುಕಟ್ಟೆಯಲ್ಲೂ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಇಡೀ ವಿಶ್ವವೇ ಅಪಾಯ ಎದುರಿಸುವಂತಹ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದರು.

ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನ ಸೇರುವ ಜಾಗ ಈ ಮಾರುಕಟ್ಟೆ. ಹಾಗಾಗಿ, ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮವಹಿಸಲಾಗಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ಈ ಸೋಂಕು ನಿವಾರಕ ಸುರಂಗ ಮಾರ್ಗ ಸ್ಥಾಪಿಸಿ ಕರೊನಾ ವೈರಸ್ ಹರಡದಂತೆ ಕ್ರಮವಹಿಸಲಾಗಿದೆ.

ಜನಸಾಮಾನ್ಯರ ಸುರಕ್ಷತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಈ ಸುರಂಗ ಮಾರ್ಗದಲ್ಲಿ ಒಳ ಹೋಗಿ ಬರಬೇಕು ಎಂದು ಸಲಹೆಯಿತ್ತರು. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಟಿ.ಎಚ್.ವಾಸುದೇವ್, ಪರಿಸರ ಇಂಜಿನಿಯರ್‌ಗಳಾದ ಕೃಷ್ಣಮೂರ್ತಿ, ಮೃತ್ಯುಂಜಯ, ಮೋಹನ್, ಆರೋಗ್ಯ ನಿರೀಕ್ಷಕರಾದ ಮನೋಹರ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಚಿದಾನಂದ್, ಪುರುಷೋತ್ತಮ್, ಅಕ್ಷಯ್ ಹಾಗೂ ವಿನಯ್ ಅವರನ್ನೊಳಗೊಂಡ ತಂಡ ಈ ಸೋಂಕು ನಿವಾರಕ ಸುರಂಗ ಮಾರ್ಗದ ಘಟಕ ಸ್ಥಾಪಿಸಿದೆ.