ಜಿಲ್ಲೆ

ತುಮಕೂರಿನಲ್ಲಿ ಮೆಗಾಗ್ಯಾಸ್ ಸ್ಥಗಿತ ; ನಗರದ ವಿವಿಧ ಬಡಾವಣೆಗಳಲ್ಲಿ ಗೃಹಿಣಿಯರ ಪರದಾಟ

ತುಮಕೂರು : ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಪಡೆದಿರುವ ನಗರವಾಸಿಗಳಿಗೆ ಹೊಸ ತಲೆನೋವು ಎದುರಾಗಿದೆ, ಕಳೆದೊಂದು ವಾರದಿಂದ ವಿವಿಧ ಬಡಾವಣೆಗಳಲ್ಲಿ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ತೊಂದರೆಯಾಗಿದೆ.

ಗ್ಯಾಸ್ ಸಂಪರ್ಕ ನೀಡಿ ಸರಬರಾಜು ಹೊಣೆ ಹೊತ್ತಿರುವ ಮೆಗಾ ಗ್ಯಾಸ್ ಸಂಸ್ಥೆ ಸಮರ್ಪಕವಾಗಿ ಗ್ಯಾಸ್ ಪೂರೈಕೆ ಮಾಡದಿರುವುದನ್ನು ಖಂಡಿಸಿ ನೂರಾರು ಮಹಿಳೆಯರು ನಗರದ ಎಸ್‌ಐಟಿ ಮುಖ್ಯರಸ್ತೆಯಲ್ಲಿರುವ ಗ್ಯಾಸ್ ಸಂಸ್ಥೆಯ ಕಚೇರಿ ಮುಂದೆ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಎಸ್‌ಐಟಿ ಮುಖ್ಯ ರಸ್ತೆಯಲ್ಲಿರುವ ಕೆಲ ಮನೆಗಳಲ್ಲಿ 3 ದಿನಗಳಿಂದ ಪೈಪ್‌ಲೈನ್‌ನಲ್ಲಿ ಗ್ಯಾಸ್ ಸರಬರಾಜಾಗಿಲ್ಲ, ಗ್ಯಾಸ್ ಇಲ್ಲದ ಕಾರಣ ಗೃಹಿಣಿಯರು ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗ್ಯಾಸ್ ವಾಸನೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಗ್ಯಾಸ್ ಸಂಸ್ಥೆಯವರಿಗೆ ಮಾಹಿತಿ ನೀಡಿದರೂ ಹಾರಿಕೆ ಉತ್ತರ ನೀಡಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಗ್ಯಾಸ್ ಇಲ್ಲದೆ ಅಡುಗೆ ಮಾಡಲು ತೊಂದರೆಯಾಗಿರುವ ಮನೆಗಳಲ್ಲಿ ಆಕ್ರೋಶಗೊಂಡ ಮಹಿಳೆಯರು ಗ್ಯಾಸ್ ಸಂಸ್ಥೆಯ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸಿಪಿಐ ಮುನಿರಾಜು ಗ್ರಾಹಕರನ್ನು ಸಮಾಧಾನಪಡಿಸಿದರು.

3 ದಿನಗಳಿಂದ ಮನೆಯಲ್ಲಿ ಗ್ಯಾಸ್ ವಾಸನೆ ಬರುತ್ತಿದೆ, ಈ ಬಗ್ಗೆ ಸಂಸ್ಥೆಯವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಗ್ಯಾಸ್ ವಾಸನೆ ಬರುತ್ತಿರುವುದರಿಂದ ಹೆದರಿ ಮಹಿಳೆಯರು ಅಡುಗೆ ಮನೆಯೊಳಗೆ ಹೋಗಲು ಹೆದರುವಂತಾಗಿದೆ. ನಮಗೆ ಸಮರ್ಪಕ ಮಾಹಿತಿ ನೀಡದಿರುವುದರಿಂದ ತುಂಬಾ ತೊಂದರೆಯಾಗಿದೆ ಎಂದು ಗೃಹಿಣಿ ಜ್ಯೋತಿ ದೂರಿದರು.

ಗ್ಯಾಸ್ ಪೈಪ್‌ಲೈನ್ ಅಳವಡಿಕೆಯಿಂದಾಗಿ ನಾವು ಸ್ಟೌವ್‌ಗೆ ಬೇರೆ ಗ್ಯಾಸ್ ಸಿಲಿಂಡರ್ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೂಡಲೇ ಸಂಸ್ಥೆಯವರು ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕರು ಒತ್ತಾಯಿಸಿದರು.

ಹೊಸ ಬಡಾವಣೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ ಭೇಟಿ ನೀಡಿ ಮೆಗಾಗ್ಯಾಸ್ ಸಂಸ್ಥೆ ಸಿಬ್ಬಂದಿ ಜತೆ ಚರ್ಚಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಹೇಳಿದರು. ರಸ್ತೆ ನಿರ್ಮಾಣದ ಕಾಮಗಾರಿಯಲ್ಲಿ ಜೆಸಿಬಿ ಯಂತ್ರ ಕೆಲಸ ಮಾಡುವಾಗ ಸಮಸ್ಯೆ ಉಂಟಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವುದಾಗಿ ಸಂಸ್ಥೆ ಸಿಬ್ಬಂದಿ ಭರವಸೆ ನೀಡಿದರು.