ಎ.ಶಶಿಕುಮಾರ್ ಶಿಡ್ಲಘಟ್ಟ
ಕಸ ವಿಲೇವಾರಿ ಘಟಕದ ತ್ಯಾಜ್ಯ ವಿಂಗಡಣೆ ಯಂತ್ರ ತುಕ್ಕು ಹಿಡಿಯುತ್ತಿರುವುದು ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಂಗಡಿಸಿ ಗೊಬ್ಬರ ತಯಾರಿಸಬೇಕೆಂಬ ನಗರಸಭೆ ಆಶಯವನ್ನು ಕಸದಲ್ಲೇ ಕೊಳೆಯುವಂತೆ ಮಾಡಿದೆ!.
ಪಟ್ಟಣದ ಹೊರವಲಯದಲ್ಲಿರುವ ಹಿತ್ತಲಹಳ್ಳಿ ಬಳಿಯ ಕಸ ಘಟಕದಲ್ಲಿ ಅಳವಡಿಸಲು 60 ಲಕ್ಷ ರೂ.ವೆಚ್ಚದ ಯಂತ್ರ ಖರೀದಿಸಲಾಗಿದೆ, ಆದರೆ ಯಂತ್ರ ಇದುವರೆಗೂ ಕೆಲಸವನ್ನೇ ಆರಂಭಿಸದಿರುವುದು ತ್ಯಾಜ್ಯದ ವೈಜ್ಞಾನಿಕ ವಿಂಗಡಣೆಯ ಗುರಿ ಮುಟ್ಟಲು ನಗರಸಭೆ ತೆವಳುವಂತೆ ಮಾಡಿದೆ.
ಹಿತ್ತಲಹಳ್ಳಿ ಸಮೀಪ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸಿ ಸುಮಾರು 10 ವರ್ಷಗಳೇ ಕಳೆದಿದೆ, ಇಲ್ಲಿ ಯಂತ್ರ ಅಳವಡಿಸಲು ಬೆಳಗಾವಿಯ ರೇ ಇಂಜಿನಿಯರ್ಸ್ ಆ್ಯಂಡ್ ಫ್ಯಾಬ್ರಿಕೇಟರ್ಸ್ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವಿವಿಧ ಅನುದಾನಗಳಿಂದ 69 ಲಕ್ಷ ರೂಪಾಯಿಯನ್ನು ಯಂತ್ರ ಖರೀದಿಗೆ ಬಿಡುಗಡೆ ಮಾಡಿತ್ತು. ಅದರಂತೆ ಯಂತ್ರ ತಂದಿರಿಸಿ ವರ್ಷ ಕಳೆದಿದೆಯಾದರೂ ಅಳವಡಿಸಿಲ್ಲ.
ಯಂತ್ರ ಅಳವಡಿಸುವಂತೆ ನಗರಸಭೆ ಸಂಪರ್ಕಿಸಿದಾಗ ಬರುತ್ತೇವೆ ಎಂದು ಹೇಳಿದ್ದ ಕಂಪನಿಯವರು ಇತ್ತ ಸುಳಿಯದೆ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿದ ಯಂತ್ರ ಇಟ್ಟಲ್ಲೇ ತುಕ್ಕುಹಿಡಿಯುತ್ತಿದ್ದು ಸರ್ಕಾರದ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಂತಿದೆ.!
ಉಸಿರು ಬಿಗಿಹಿಡಿದು ಜೀವನ : ವೈಜ್ಞಾನಿಕ ಕಸ ರೀತಿಯಲ್ಲಿ ವಿಂಗಡಿಸಲಾಗುತ್ತದೆ ಎಂದು ಹೇಳಿ ಗ್ರಾಮಸ್ಥರ ಮನವೊಲಿಸಿ ನಿರ್ಮಿಸಲಾದ ಘಟಕದಲ್ಲಿ ಕೇವಲ ಕಸ ಸಂಗ್ರಹಣೆ ಮಾತ್ರ ಮಾಡಲಾಗುತ್ತಿದೆ. 10 ವರ್ಷಗಳಿಂದ ನಗರದ ಕಸವನ್ನು ಇಲ್ಲಿ ಸುರಿಯಲಾಗುತ್ತಿದ್ದು ಕಸದ ಗುಡ್ಡವೇ ನಿರ್ಮಾಣವಾಗಿದೆ, ಘಟಕದಿಂದ ಕಿಲೋಮೀಟರ್‌ಗಟ್ಟಲೇ ದುರ್ನಾತ ಬೀರುತ್ತಿದ್ದು ಅಕ್ಕಪಕ್ಕದ ಗ್ರಾಮಸ್ಥರು ಉಸಿರು ಬಿಗಿಹಿಡಿದು ದಿನದೂಡುವಂತಾಗಿದೆ, ಇದರ ಜತೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಹಳೆಯ ತಗಡು, ಹೊಸ ಬಣ್ಣ! : 60 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿರುವ ಯಂತ್ರ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 4 ಮೋಟಾರ್‌ಗಳನ್ನು ಹೊರತುಪಡಿಸಿದರೆ ಎಲ್ಲ ಬಿಡಿಭಾಗಗಳು ಹಳೆಯದರಂತೆ ಕಾಣಿಸುತ್ತಿದೆ, ಹಳೆಯ ಕಬ್ಬಿಣದ ತಗಡಿಗೆ ಬಣ್ಣ ಬಳಿದು ತಂದು ನಿಲ್ಲಿಸಿರುವ ಅನುಮಾನವನ್ನು ನಗರಸಭೆ ಸದಸ್ಯರೇ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಶಾಮೀಲು? : ತ್ಯಾಜ್ಯ ವಿಂಗಡಣೆ ಯಂತ್ರ ಖರೀದಿಯಲ್ಲಿ ಗುತ್ತಿಗೆದಾರರೊಂದಿಗೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಯಂತ್ರ ಅಳವಡಿಸುವುದಕ್ಕೂ ಮುನ್ನವೇ ಗುತ್ತಿಗೆದಾರರಿಗೆ ಸುಮಾರು 60 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಅದರಂತೆ ವರ್ಷದ ಹಿಂದೆ ಯಂತ್ರ ತರಲಾಗಿದ್ದು ಅಳವಡಿಕೆ ಮಾಡಿಲ್ಲ. ಹಣ ಪಡೆದ ಗುತ್ತಿಗೆದಾರರು ಕೈ ಎತ್ತುವ ಲಕ್ಷಣಗಳೇ ಹೆಚ್ಚಾಗಿದ್ದು ಈಗ ನೋಟಿಸ್ ನೀಡುವ ಮೂಲಕ ಅವ್ಯವಹಾರ ಮುಚ್ಚಿಹಾಕುವ ಕೆಲಸ ನಡೆಯುತ್ತಿದೆ.