ಚಿಕ್ಕಬಳ್ಳಾಪುರ : ವಾಡಿಕೆಗಿಂತಲೂ ಹಿಂಗಾರಿನಲ್ಲಿ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಜಲಮೂಲಗಳು ಸಮೃದ್ಧಿಯ ನೀರಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಪ್ರಸ್ತುತ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡು, ಶ್ರೀನಿವಾಸ ಸಾಗರ, ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದಿದೆ. ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಭರ್ತಿಯಾಗಿದೆ. ಗೌರಿಬಿದನೂರು ಭಾಗದಲ್ಲಿ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಬಹುತೇಕ ಕೆರೆಗಳು, ಕುಂಟೆಗಳು ಭರ್ತಿಯಾಗಿವೆ.
ಧುಮ್ಮಿಕ್ಕುತ್ತಿರುವ ಕೇತೇನಹಳ್ಳಿ ಾಲ್ಸ್
ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಫಾಲ್ಸ್ನಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ಈ ರಮಣೀಯ ದೃಶ್ಯವನ್ನು ಸವಿಯಲು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಬಿಗಿಕ್ರಮ ಕೈಗೊಂಡಿದ್ದು, ಜನರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಮುಂಬರುವ ದಿನಗಳಲ್ಲಿ ಮಳೆ ಬಿದ್ದಲ್ಲಿ ಜಲಮೂಲಗಳಿಗೆ ಮತ್ತಷ್ಟು ಕಳೆ ಬರಲಿದೆ.
ನೀರಿನ ತಾಣಗಳಲ್ಲಿ ಮುಂಜಾಗ್ರತಾ ಕ್ರಮ
ನೀರು ಹರಿಯುವ ತಾಣಗಳು, ನದಿ ಪಾತ್ರಗಳಲ್ಲಿ ಪ್ರಾಣಹಾನಿ, ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿದೆ. ಸಾರ್ವಜನಿಕರು, ಅದರಲ್ಲೂ ಮಕ್ಕಳು ಈಜಾಡಲು, ಆಟವಾಡಲು ಹಾಗೂ ಮೀನು ಹಿಡಿಯಲು ನೀರಿಗಿಳಿಯುವ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲು, ಆಯಾ ವ್ಯಾಪ್ತಿಯಲ್ಲಿ ನೀರಿನ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಹಸೀಲ್ದಾರ್, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಸಹಾಯವಾಣಿ ಕೇಂದ್ರ ಸ್ಥಾಪನೆ
ವಿಪತ್ತು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಕೇಂದ್ರ ಸ್ಥಳಗಳಲ್ಲಿ ಇದ್ದು, 27 ಗಂಟೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಹಾಗೆಯೇ ಮಳೆ ಹಾನಿ ಅವಘಡಗಳನ್ನು ತಡೆಗಟ್ಟಲು ಸಹಾಯವಾಣಿ ಕೇಂದ್ರಗಳನ್ನು ತೆರೆದು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಲು ತಿಳಿಸಲಾಗಿದೆ.
ಸಹಾಯವಾಣಿ ಕೇಂದ್ರ
ಡಿಸಿ ಕಚೇರಿ:08156277071
ಎಸಿ ಕಚೇರಿ:08156272504
*ಚಿಕ್ಕಬಳ್ಳಾಪುರ: 808817701/9945609541
ಶಿಡ್ಲಘಟ್ಟ: 08158256764
ಚಿಂತಾಮಣಿ:08154252164
ಮಂಚೇನಹಳ್ಳಿ:6360184832
ಚೇಳೂರು/ಬಾಗೇಪಲ್ಲಿ: 08150200127
ಗುಡಿಬಂಡೆ: 08156271250