ಬೇತಮಂಗಲ: ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಬೇತಮಂಗಲ ಪಾಲಾರ್ ಕೆರೆ ಕೆಸಿ ವ್ಯಾಲಿ ನೀರು ಹರಿದು ಬರುವ ಮುಂಚೆಯೇ ತುಂಬಿದ್ದು, ಕೋಡಿ ಹರಿಯಲು ಸಿದ್ಧವಾಗುತ್ತಿದೆ. ಕೋಲಾರ ಜಿಲ್ಲೆಯ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾದ ಹಾಗೂ ಕುಡಿಯುವ ನೀರೊದಗಿಸುವ ಪಾಲಾರ್ ಕೆರೆಯು ಒಟ್ಟು 1 ಸಾವಿರ ಎಕರೆ ವಿಸ್ತೀರ್ಣವಿದೆ. ಸುಮಾರು 6 ಸಾವಿರ ಕ್ಯೂಸೆಕ್ ನೀರು ಶೇಖರಣೆ ಸಾಮರ್ಥ್ಯವಿರುವ ಈ ಕೆರೆ ಕೆಜಿಎಫ್ ನಗರ ಸೇರಿ ಸುತ್ತಮುತ್ತಲ ನೂರಾರು ಹಳ್ಳಿಗಳ ಜನರ ಜೀವನಾಡಿಯಾಗಿದೆ.
ಕೆಜಿಎಫ್ ಮತ್ತು ಬೇತಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಈ ಕೆರೆ ಆವರಣದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಇಲ್ಲಿ ಶುದ್ಧೀಕರಿಸಿದ ನಂತರ ಕೆಜಿಎ್ ಮತ್ತು ಬೇತಮಂಗಲ ಪಟ್ಟಣಗಳಿಗೆ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ.
ಕೆಸಿ ವ್ಯಾಲಿಗೆ ಕೆರೆ ಸೇರ್ಪಡೆ: 450 ಕೋಟಿ ರೂ. ವೆಚ್ಚದ ಕೆಸಿ ವ್ಯಾಲಿ ಯೋಜನೆಯಲ್ಲಿ ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಒಟ್ಟು 146 ಕೆರೆಗಳಿಗೆ ತುಂಬಿಸಲಾಗುತ್ತಿದೆ. ಈ ಯೋಜನೆಯಲ್ಲಿ ಕೆಜಿಎಫ್ ತಾಲೂಕಿನ ಬೇತಮಂಗಲದ ಪಾಲಾರ್ ಕೆರೆ ಮತ್ತು ರಾಮಸಾಗರ ಬುಕ್ಕಸಾಗರ ಕೆರೆ ಸೇರಿವೆ. 2016ರಲ್ಲಿ ಯೋಜನೆ ಪ್ರಾರಂಭವಾಗಿದ್ದು, ಎರಡು ವರ್ಷದಲ್ಲಿ ಕೆರೆ ತುಂಬಲಿವೆ ಎಂದು ಸರ್ಕಾರ ಮತ್ತು ಉಸ್ತುವಾರಿ ವಹಿಸಿಕೊಂಡ ಸಣ್ಣ ನೀರಾವರಿ ಇಲಾಖೆ ತಿಳಿಸಿತ್ತು.
ಶಾಸಕಿ ಕೊಡುಗೆ ಅಪಾರ: 3 ವರ್ಷಗಳ ಹಿಂದೆ ಕೆರೆಯ ಸಂಪೂರ್ಣನೀರು ಖಾಲಿಯಾಗಿ ಗಿಡ-ಗಂಟಿಗಳಿಂದ ತುಂಬಿಕೊಂಡಿತ್ತು. ಶಾಸಕಿ ರೂಪಕಲಾ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಸಹಕಾರ ಸಿಗದಿದ್ದರೂ ಕೆಜಿಎಫ್-ಬೆಮೆಲ್ ಆಡಳಿತ ಮಂಡಳಿಯಿಂದ ಸಹಾಯ ಪಡೆದು ಸ್ವಂತ ಹಣ ವೆಚ್ಚ ಮಾಡಿ ಸುಮಾರು 2 ತಿಂಗಳು ಜೆಸಿಬಿ, ಬೆಮೆಲ್ ಬುಲ್ಡೋಜರ್ ಮೂಲಕ ಸ್ವಚ್ಛತೆ ಕೈಗೊಂಡು ಕೆರೆಗೆ ಹೊಸ ರೂಪ ನೀಡಿದ್ದರು.
ಕಲುಷಿತ ನೀರಿನಿಂದ ಮುಕ್ತ: ಕೆಸಿ ವ್ಯಾಲಿ ಎಂಬ ವಿಷಪೂರಿತ ರಾಸಾಯನಿಕಭರಿತ ಮತ್ತು ಕಲುಷಿತ ನೀರನ್ನು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಬೇತಮಂಗಲ ಕೆರೆಗೆ ಹರಿಸುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು. ಆದರೆ 2017ರಲ್ಲಿ ಭರ್ಜರಿ ಮಳೆಯಿಂದಾಗಿ ಕೋಡಿ ಹರಿದಿತ್ತಲ್ಲದೆ ಸುಮಾರು 3 ವರ್ಷ ನೀರಿಗೆ ಬರ ಬಂದಿರಲಿಲ್ಲ. ಇದೀಗ ಮತ್ತೆ ಪ್ರಕೃತಿ ಕೊಡುಗೆಯಿಂದಾಗಿ ಕೆರೆ ತುಂಬಿ ತುಳುಕುತ್ತಿದೆ.