ವಿಜಯವಾಣಿ ಸುದ್ದಿಜಾಲ ಕುಮಟಾ: ಕಂದಾಯ ಇಲಾಖೆ ಮಂಡಿಸಿರುವ ತುಂಡು ಭೂಮಿ ಕಾನೂನು ವಿರೋಧಿಸಿ ಸಾರ್ವಜನಿಕರು ಶುಕ್ರವಾರ ತಹಸೀಲ್ದಾರ್ ಕಾರ್ಯಾಲಯದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆ ಪ್ರತಿಶತ 85ಕ್ಕಿಂತ ಹೆಚ್ಚು ಅರಣ್ಯಭೂಮಿ ಹೊಂದಿದ್ದು ಉಳಿದ ಪ್ರದೇಶದಲ್ಲಿ ಹೆದ್ದಾರಿಗಳು ಹಾಗೂ ಇತರ ರಸ್ತೆಗಳು, ಸರ್ಕಾರ ಆಸ್ತಿಗಳು, ಸಾರ್ವಜನಿಕ ಆಸ್ತಿಗಳಿವೆ. ಜಿಲ್ಲಾದ್ಯಂತ ತುಂಡು ಭೂಮಿಯೇ ಇದ್ದು ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇದನ್ನು ಪರಿಗಣಿಸಿಯೇ 1952 ರಲ್ಲೇ ಉತ್ತರ ಕನ್ನಡ ಜಿಲ್ಲೆಗೆ ತುಂಡು ಭೂಮಿ ಕಾಯ್ದೆಯಿಂದ ಸರ್ಕಾರವು ವಿನಾಯಿತಿ ನೀಡಿತ್ತು.
ಡಾ. ಕಸ್ತೂರಿ ರಂಗನ್ ವರದಿಯ ಪ್ರಕಾರ ಇಲ್ಲಿನ ಜನವಸತಿಯ ಬಹುಭಾಗ ಪಶ್ಚಿಮ ಘಟ್ಟದ ಅಡಿಯಲ್ಲಿ ಬರುತ್ತಿದ್ದು ತಮ್ಮ ಕೃಷಿಯೋಗ್ಯ ಮನೆ ಕಟ್ಟಿಕೊಳ್ಳುವುದು ದುಸ್ತರವಾಗಿದೆ. ಜಿಲ್ಲೆಯಲ್ಲಿ 6 ಪ್ರಮುಖ ನದಿಗಳು ಹರಿಯುತ್ತಿದ್ದು ಉಪ್ಪು ನೀರು ತುಂಬುವ ವಾಸಯೋಗ್ಯವಲ್ಲದ ಭೂ ಪ್ರದೇಶ ಸಾಕಷ್ಟಿದ್ದು, ಒಂದೆಡೆ ಕರಾವಳಿ ನಿಯಂತ್ರಣ ವಲಯ ಇನ್ನೊಂದೆಡೆ ಪಶ್ಚಿಮ ಘಟ್ಟದಿಂದಾಗಿ ಜನರು ವಾಸ್ತವ್ಯಕ್ಕೆ ಅತಿ ಚಿಕ್ಕ ಜಮೀನು ಒದಗಿಸಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೃಷಿ ಭೂಮಿ ವರ್ಗಾವಣೆ ಕುರಿತು ಕನಿಷ್ಠ ಮಿತಿ 3 ಗುಂಟೆ ಎಂದು ಕಂದಾಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದನ್ನು ಯಾವುದೇ ಕಾರಣಕ್ಕೂ ಸರ್ಕಾರವು ಅನುಮೋದನೆ ಮಾಡಬಾರದು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ವೇಳೆ ಎಂ.ಎಂ. ಹೆಗಡೆ, ಕಿರಣ ಕಾಮತ, ವಿನಾಯಕ ಪಟಗಾರ, ಗಣಪತಿ ನಾಯ್ಕ, ರವೀಶ ನಾಯ್ಕ, ದೇವಾನಂದ ಪಟ್ಕುರೆ, ಲಿಂಗಪ್ಪ ಪಟಗಾರ, ನಾಗರಾಜ ನಾಯ್ಕ, ಚೇತನ ಕುಮಟಾಕರ, ರಾಧಾಕೃಷ್ಣ ನಾಯ್ಕ, ಎಂ.ಎ. ಶೇಖ್, ಸುಬ್ರಾಯ ಮಡಿವಾಳ, ಜಿ.ಪಿ.ಬೀಳಗಿ, ನೂರುಲ್ಲಾ ಬಿ, ಗಣೇಶ ಹೆಗಡೆ, ಈಶ್ವರ ಕಡ್ಲೆ , ನಾಗರಾಜ ಜೋಶಿ ಇನ್ನಿತರರು ಇದ್ದರು.