ಬೀರೂರು ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಎಇಇ ನಂದೀಶ್, ಯತೀಶ್, ಜೆ.ಟಿ.ರಮೇಶ್, ಕಿಶೋರ್‌ರಾಜ್, ಬಿ.ಟಿ.ಓಂಕಾರಮ್ಮ ಇದ್ದರು. 
ಜಿಲ್ಲೆ

ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿ ಬದಲಾಯಿಸಿ

ಬೀರೂರು: ಗಾಳಿಹಳ್ಳಿ ಗ್ರಾಮದ ಮನೆ ಮುಂದೆ ಹಾದುಹೋಗಿರುವ ವಿದ್ಯುತ್ ತಂತಿ ಹಳೆಯದಾಗಿದ್ದು ಆಗಾಗ ತುಂಡಾಗುತ್ತಿದೆ. ವಿದ್ಯುತ್ ತಂತಿ ಬದಲಿಸಿ ಎಂದು ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಏನಾದರೂ ಅನಾಹುತ ಸಂಭವಿಸಿದರೆ ಮೆಸ್ಕಾಂ ಅಧಿಕಾರಿಗಳೇ ಹೊಣೆಗಾರರು ಎಂದು ಗ್ರಾಮಸ್ಥ ಹಾಲಪ್ಪ ಹೇಳಿದರು.

ಮೆಸ್ಕಾಂ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿರುವುದನ್ನು ಇಲಾಖೆ ಅಧಿಕಾರಿಗಳು ಮರೆತಿದ್ದಾರೆ. ನಾಲ್ಕು ವರ್ಷಗಳಿಂದ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಗಾಳಿಹಳ್ಳಿ ನರಸಿಂಹಪ್ಪ, ತಿಮ್ಮರಾಯ ಧ್ವನಿಗೂಡಿಸಿದರು.

ಗಾಳಿಹಳ್ಳಿ ಶೇಖರಪ್ಪ ಮಾತನಾಡಿ, ಜಮೀನಿನಲ್ಲಿರುವ ವಿದ್ಯುತ್ ಲೈನ್ ಹಳೆಯದಾಗಿದ್ದು ಇತ್ತೀಚೆಗೆ ತುಂಡಾಗಿ ಬಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಜನ, ಜಾನುವಾರುಗಳು ಸಂಚರಿಸಲಿಲ್ಲ. ಇಂಥ ಹಳೆಯ ವಿದ್ಯುತ್ ಲೈನ್‌ಗಳನ್ನು ಬದಲಿಸಿ ರೈತರನ್ನು ರಕ್ಷಿಸಿ ಎಂದು ಒತ್ತಾಯಿಸಿದರು.

ಬೀರೂರು ಪುರಸಭೆ ಸದಸ್ಯ ಲಕ್ಷ್ಮಣ್ ಮಾತನಾಡಿ, ಪಟ್ಟಣದ ದುರ್ಗಮ್ಮ ದೇವಸ್ಥಾನ ಬೀದಿ ಹಾಗೂ ಅಂಡರ್‌ಬ್ರಿಡ್ಜ್ ಮೇಲ್ಭಾಗದ ರಸ್ತೆಗಳಲ್ಲಿರುವ ತಾಮ್ರದ ವಿದ್ಯುತ್ ಲೈನ್ ಬದಲಿಸುವಂತೆ ಮನವಿ ನೀಡಿದರೂ ಉಪಯೋಗವಾಗಿಲ್ಲ. ಪೊಲೀಸ್ ಠಾಣೆ ಪಕ್ಕದಲ್ಲಿರುವ ವಿದ್ಯುತ್ ಬಿಲ್ ಪಾವತಿಸುವ ಎಟಿಪಿ ಯಂತ್ರ ಮತ್ತು ದೂರು ನೋಂದಣಿ ಕಚೇರಿಯ ಬಾಗಿಲು ಏಕೆ ತೆರೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ನಾಗರಿಕ ಮಧು ಬಾವಿಮನೆ ಮಾತನಾಡಿ, ವಾರ್ಡ್ ನಂ.21 ಮತ್ತು 23ರಲ್ಲಿ ಕೆಲವು ಕಂಬಗಳು ಕಬ್ಬಿಣ ಕಾಣುವಂತಹ ದುಸ್ಥಿತಿಯಲ್ಲಿವೆ. ಇದರ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಪಟ್ಟಣದ ಕೆಲವು ಭಾಗಗಳಲ್ಲಿ ಕಂಬಗಳಿಗೆ ಬಳ್ಳಿಗಳು ಹಬ್ಬಿಕೊಂಡಿವೆ. ವಿದ್ಯುತ್‌ಲೈನ್ ಜೋತುಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಅವುಗಳನ್ನು ಗುರುತಿಸಿ ಸರಿಪಡಿಸಿ ಎಂದರು. ಬಿ.ಕೋಡಿಹಳ್ಳಿಯಲ್ಲಿ ಪರಿವರ್ತಕವನ್ನು ಬದಲಿಸಿಕೊಡಿ ಎಂದು ಜಯಣ್ಣ ಮನವಿ ಮಾಡಿದರು.

ಹೂವಿನಹಳ್ಳಿ ಆರಾಧ್ಯ ಮಾತನಾಡಿ, ಒಬ್ಬನೇ ಮಾಲೀಕತ್ವದಲ್ಲಿರುವ ತೋಟದ ಮೂರ್ನಾಲ್ಕು ಕೊಳವೆ ಬಾವಿಗಳಿಗೆ ಎರಡು ಟಿಸಿಗಳಿಂದ ಸಂಪರ್ಕ ಹೊಂದಲು ಇಲಾಖೆ ಅನುಮೋದನೆ ನೀಡುತ್ತದೆಯೇ ಎಂದು ಪ್ರಶ್ನಿಸಿದರು.

ಎಇಇ ನಂದೀಶ್ ಪ್ರತಿಕ್ರಿಯಿಸಿ, ಹಾಲಪ್ಪ ಅವರ ಮನೆ ಮುಂದಿನ ವಿದ್ಯುತ್ ಲೈನ್ ಬದಲು ಜಮೀನಿನಲ್ಲಿರುವ ಹಳೆಯ ಲೈನ್‌ಗಳ ಬದಲಾವಣೆಗೆ ಅಂದಾಜು ಪಟ್ಟಿ ತಯಾರಿಸಲಾಗುವುದು. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು. ಹೂವಿನಹಳ್ಳಿಯಲ್ಲಿ ಎರಡು ಟಿಸಿಗಳಿಂದ ಸಂಪರ್ಕ ಹೊಂದಿರುವ ಸ್ಥಳ ಪರಿಶೀಲನೆ ನಡೆಸುತ್ತೇನೆ. ನಂತರ ಕ್ರಮ ಕೈಗೊಳ್ಳಲಾಗುವುದು. ವಾರ್ಡ್ ನಂ.22 ಹಾಗೂ 23ರಲ್ಲಿ ಕೆಲವು ಕಂಬಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ಬದಲಿಸಿ ಹೊಸ ಕಂಬಗಳ ಅಳವಡಿಸಲಾಗುವುದು. ಕಂಬಗಳಲ್ಲಿ ಬೆಳೆದುಕೊಂಡಿರುವ ಬಳ್ಳಿ, ಗಿಡಗಂಟಿಗಳನ್ನು ಕೂಡಲೇ ತೆರವು ಮಾಡಿಸಲಾಗುವುದು. ಜೋತುಬಿದ್ದಿರುವ ಲೈನ್ ಸರಿಪಡಿಸಲಾಗುವುದು. ಪ್ರತಿಯೊಬ್ಬರೂ ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ ಬಿಲ್ ಪಾವತಿಸುತ್ತಿರುವುದರಿಂದ ಪೊಲೀಸ್ ಠಾಣೆ ಪಕ್ಕದಲ್ಲಿ ಬಿಲ್ ಪಾವತಿಸುವ ಎಟಿಪಿ ಯಂತ್ರವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದರು.

ಮೆಸ್ಕಾಂ ಯಗಟಿ ಎಇ ಜೆ.ಟಿ.ರಮೇಶ್, ಹಿರೇನಲ್ಲೂರು ಜೆಇ ಕಿಶೋರ್‌ರಾಜ್, ಲೆಕ್ಕಾಧಿಕಾರಿ ಬಿ.ಟಿ.ಓಂಕಾರಮ್ಮ, ವಿವಿಧ ಗ್ರಾಮಗಳ ಜನರು ಇದ್ದರು.