ತುಂಗಾ ಹಾಗೂ ಭದ್ರಾ ನದಿಗಳ ಉಳಿವಿಗಾಗಿ ಆರಂಭಗೊಂಡಿರುವ ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಬುದವಾರ ಶ್ರಿ ಮಠದ ನರಸಿಂಹವನದ ಅದಿಷ್ಟಾನ ಮಂದಿರದ ಸಮೀಪ ದೀಪ ಪ್ರಜ್ವಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಆಶೀರ್ವದಿಸಿದರು. 
ಜಿಲ್ಲೆ

ತುಂಗಭದ್ರಾ ಉಳಿವಿಗಾಗಿ ಪಾದಯಾತ್ರೆ ಆರಂಭ

ಚಿಕ್ಕಮಗಳೂರು: ತುಂಗಾ ಹಾಗೂ ಭದ್ರಾ ನದಿಗಳ ಉಳಿವಿಗಾಗಿ ಆರಂಭಗೊಂಡಿರುವ ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಬುದವಾರ ಶ್ರಿ ಮಠದ ನರಸಿಂಹವನದ ಅದಿಷ್ಟಾನ ಮಂದಿರದ ಸಮೀಪ ದೀಪ ಪ್ರಜ್ವಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಆಶೀರ್ವದಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ, ಎಲ್ಲ ನದಿಗಳು ನಮ್ಮ ಸನಾತನ ಧರ್ಮದ ಸಂಕೇತ. ಎಲ್ಲ ನದಿಗಳಿಗೂ ಋಷಿ ಪರಂಪರೆಯಿದೆ. ನದಿಗಳ ಪಾವಿತ್ರ್ಯತೆಗೆ ಧಕ್ಕೆ ಭಾರದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಸರ್ವರ ಮೇಲಿದೆ. ನದಿಗಳ ಉಳಿವಿಗಾಗಿ ಆರಂಭಗೊಂಡಿರುವ ಅಭಿಯಾನ ಯಶಸ್ವಿಯಾಗಲಿ ಎಂದು ಅನುಗ್ರಹಿಸಿದರು.

ಉತ್ತರ ಪ್ರದೇಶದ ಪರಿಸರ ತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಮಾಶಂಕರ ಪಾಂಡೆ ಮಾತನಾಡಿ, ಹರಿಯುವ ನೀರನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯ. ನೀರನ್ನು ಯಾರೂ ಕಲುಷಿತ ಮಾಡಬಾರದು. ಹರಿಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನು ನಿಂಗಿಸಬೇಕು. ಈ ಧ್ಯೇಯ ವಾಕ್ಯವನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಮುಂದಿನ ಪೀಳಿಗೆಗೆ ಶುದ್ಧವಾದ ನೀರನ್ನು ನೀಡಲು ಸಾಧ್ಯ ಎಂದು ಹೇಳಿದರು.

ನೀರಿಗೆ ಯಾವುದೇ ಜಾತಿ ಧರ್ಮವಿಲ್ಲ. ಸರ್ವರಿಗೂ ನೀರು ಬೇಕೇ ಬೇಕು. ಹೀಗಾಗಿಯೇ ಎಲ್ಲಾ ಧರ್ಮದವರು ನೀರನ್ನು ತೀರ್ಥವನ್ನಾಗಿ ಬಳಸುತ್ತಾರೆ. ಗರ್ಭಾವಸ್ಥೆಯಿಂದ ಅಂತಿಮ ಸಂಸ್ಕಾರದ ವರೆಗೆ ಮನುಷ್ಯನಿಗೆ ಅತ್ಯಗತ್ಯವಾಗಿರುವ ನೀರನ್ನು ಯಾರೊಬ್ಬರೂ ಕಲುಷಿತ ಮಾಡಬಾರದು ಎಂದು ಕರೆ ನೀಡಿದರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಚಾಲಕ ಬಸವರಾಜ ಪಾಟೀಲ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಲ್ಲಿ ಜಲ ಜಾಗೃತಿ ಮೂಡಿಸುವ ಉದ್ದೇಶದಿಂದ 24 ರಾಜ್ಯಗಳಲ್ಲಿ 23,000 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದೇವೆ. ಇದರಲ್ಲಿ 18 ರಾಜ್ಯಗಳಲ್ಲಿ ಜನರಲ್ಲಿ ಜಲ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯು ಆಗಿದ್ದೇವೆ. ಸ್ಥಳೀಯ ಮಠಾಧೀಶರು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮುಂಬರುವ ದಿನಗಳಲ್ಲಿ ನದಿಗಳ ಪರಿಶುದ್ಧತೆಗಾಗಿ ನಿರಂತರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಅತ್ಯಂತ ಪವಿತ್ರ ನದಿಗಳೆ ಎಂದು ಪ್ರಖ್ಯಾತಿ ಪಡೆದಿದ್ದ ತುಂಗಾ ಹಾಗೂ ಭದ್ರಾ ನದಿಗಳು ಇಂದು ಕಲುಷಿತಗೊಂಡಿವೆ. ಈ ನದಿಗಳ ಉಳಿವಿಗಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ನಿರ್ಮಲ ತುಂಗಭದ್ರ ಅಭಿಯಾನ ಆರಂಭಿಸಿವೆ. ಪಾದಯಾತ್ರೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್, ಪರ್ಯಾಯವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ, ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಗಿರೀಶ್ ಪಟೇಲ್, ಎಂ.ಶಂಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ, ವಿದ್ಯಾರಣ್ಯ ಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಹಂಚಲಿ ರಾಘವೇಂದ್ರ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.