ಜಿಲ್ಲೆ

ತೀವ್ರ ಕಟ್ಟೆಚ್ಚರ ವಹಿಸುವಂತೆ ಡಿಸಿ ಸೂಚನೆ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ನಿಗಮ ಮಂಡಳಿಗಳಲ್ಲಿನ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಶನಿವಾರ ಮತ್ತು ಭಾನುವಾರ ಜಿಲ್ಲೆಯ ೫೧ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಅವ್ಯವಹಾರ, ನಕಲಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಫೌಜಿಯ್ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಎರಡು ದಿನದ ಪರೀಕ್ಷೆಗೆ ನಗರದಲ್ಲಿ ೩೪ ಮತ್ತು ತಾಲೂಕು ಹಂತದಲ್ಲಿ ೧೭ ಕೇಂದ್ರ ಸ್ಥಾಪಿಸಲಾಗಿದೆ. ೨೦,೨೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆ ಸುಗಮ, ನಕಲು ತಡೆಗಟ್ಟಲು ೫೧ ಕೇಂದ್ರಗಳಿಗೂ ಜಾಗೃತದಳ ಸದಸ್ಯರನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆ ಕೇಂದ್ರಕ್ಕೆ ಕೊಂಡೊಯ್ಯುವಾಗ ಕಾವಲಿಗಾಗಿ ೨೨ ತಂಡ ರಚಿಸಲಾಗಿದೆ. ಪ್ರತಿ ಕೇಂದ್ರದ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳ ತಪಾಸಣೆಗೆ ಪೊಲೀಸ್ ಬಂದೋಬಸ್ತ್ ಮಾಡುವಂತೆ ಆಯುಕ್ತ ಆರ್.ಚೇತನ್ ಮತ್ತು ಹೆಚ್ಚುವರಿ ಎಸ್‌ಪಿ ಶ್ರೀನಿಧಿ ಅವರಿಗೆ ನಿರ್ದೇಶನ ನೀಡಿದರು.

ಮೊಬೈಲ್ ನಿಷೇಧ: ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲೂಟೂತ್, ವೈರಲೆಸ್ ಸೆಟ್ ಸೇರಿ ಯಾವುದೇ ಇಲೆಕ್ಟಾçನಿಕ್ಸ್ ವಸ್ತು ಬಳಕೆ ನಿಷೇಧಿಸಿದ್ದು, ಕೇಂದ್ರದಲ್ಲಿ ಉಪ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಬೇರೆ ಯಾವುದೇ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೊಬೈಲ್ ಬಳಸುವಂತಿಲ್ಲ. ತೆಗೆದುಕೊಂಡು ಸಹ ಹೋಗುವಂತಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀ. ನಿಷೇಧಿತ ಪ್ರದೇಶ ಘೋಷಿಸಿದ್ದು, ಇದರ ವ್ಯಾಪ್ತಿಯ ಜಿರಾಕ್ಸ್, ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾತನಾಡಿ, ಅಧಿಕಾರಿ ಮತ್ತು ಕಾಲೇಜಿನ ಮುಖ್ಯಸ್ಥರು ತಮಗೆ ವಹಿಸಿದ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಬೇಕು. ಯಾವುದೇ ಗಲಾಟೆ ಆಗದಂತೆ ಎಚ್ಚರಿಕೆ ವಹಿಸಬೇಕು. ತುರ್ತು ಸಂದರ್ಭದಲ್ಲಿ ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹೇಳಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು. ಡಿಸಿಪಿ ಕನಿಕಾ ಸಿಕ್ರಿವಾಲ್, ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ್ ಇತರರಿದ್ದರು.