ಜಿಲ್ಲೆ

ತೀರ್ಥ ಉದ್ಭವಿಸುವ ಐತಿಹಾಸಿಕ ತೀರ್ಥಗಿರೀಶ್ವರ ದೇಗುಲ : ಬೇಸಿಗೆಯಲ್ಲೂ ಚಿಮ್ಮುವ ನೀರು, ಇಷ್ಟಾರ್ಥ ಸಿದ್ಧಿಗಾಗಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ

ಕೆ.ಆರ್​.ಚಂದ್ರಶೇಖರ್​, ಲಕ್ಕೂರು

ದೇವಾಲಯದ ಬಂಡೆಯೊಳಗೆ ಸದಾ ತೀರ್ಥ ಉದ್ಬವಿಸುತ್ತಿರುವುದರಿಂದ ತೀರ್ಥಬಂಡಹಟ್ಟಿ ಎಂದು ಹೆಸರು ಪಡೆದು ಪ್ರಸಿದ್ಧಿ ಪಡೆದಿರುವ ಶ್ರೀ ತೀರ್ಥಗಿರೀಶ್ವರಸ್ವಾಮಿ ಭಕ್ತರ ಆರಾಧ್ಯದೈವ.

ಮಾಲೂರು ತಾಲೂಕಿನ ಮಾಸ್ತಿ ಹಾಗೂ ದಿನ್ನಹಳ್ಳಿ ಮುಖ್ಯರಸ್ತೆ ಸಮೀಪ ಇರುವ ತೀರ್ಥಬಂಡೆಹಟ್ಟಿ ಗ್ರಾಮದ ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ತೀರ್ಥಬಂಡಹಟ್ಟಿಯಲ್ಲಿ ವಿಶಾಲವಾದ ಬಂಡೆಯ ಮೇಲೆ ನೆಲೆಸಿರುವ ಸ್ವಾಮಿಯ ದೇವಾಲಯದ ಗರ್ಭ ಗುಡಿಯಲ್ಲಿ ಶಿವನ ಲಿಂಗ ಪ್ರತಿಷ್ಠಾಪನೆ ಮಾಡಿದ್ದು, ಶಿವನ ವಿಗ್ರಹದ ಮುಂದೆಯೇ ಬಂಡೆಯಲ್ಲಿರುವ ಹಳ್ಳದಲ್ಲಿ ಸದಾ ತೀರ್ಥ ಉದ್ಭವಿಸುತ್ತಿದ್ದು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ.

ಪಶ್ಚಿಮಾಭಿಮುಖವಾಗಿರುವ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದ್ದು, ಭಕ್ತರ ಕೋರಿಕೆಗಳನ್ನು ಈಡೇರಿಸುವ ದೇವಾಲಯವಾಗಿದೆ ಎನ್ನುವುದು ನಂಬಿಕೆ.

ಇತಿಹಾಸ

ಶಿವನ ಆರಾಧಕ ಸುಕುಮಂದ ಮಹಾ ಋಷಿಯೊಬ್ಬರು ಶಿವನಿಗೆ ಅಭಿಷೇಕ ಮಾಡಲು ಪ್ರತಿನಿತ್ಯ ಕಾಶಿಯಿಂದ ನೀರು ತಂದು ಅಭಿಷೇಕ ಮಾಡುತ್ತಿದ್ದು, ಋಷಿಗಳ ಭಕ್ತಿಯನ್ನು ಮೆಚ್ಚಿ ಶಿವನ ವಿಗ್ರಹದ ಮುಂದೆ ಗಂಗೆ ಉದ್ಬವಿಸಿದಳು ಎಂಬ ಪ್ರತಿತಿಗೆ ಸದಾ ನೀರು ಚಿಮ್ಮುತ್ತಿರುವುದು ಸಾಯಾಗಿದೆ. ಶಿವನ ಗರ್ಭಗುಡಿ ಮುಂದೆ ಇರುವ ಹಳ್ಳದಲ್ಲಿ ಸದಾ ಗಂಗಾ ತೀರ್ಥ ಉದ್ಭವವಾಗುತ್ತದೆ. ಇಲ್ಲಿ ಶಿವನ ವಿಗ್ರಹವು ಪಶ್ವಿಮ ದಿಕ್ಕಿಗೆ ಮುಖ ಮಾಡಿರುವುದು ವಿಶೇಷವಾಗಿದೆ. ಪಕ್ಕದಲ್ಲೇ ಪಾರ್ವತಿ ದೇವಾಲಯವಿದೆ.

ನೀರಿನ ಚಿಲುಮೆ: ಈ ಭಾಗದಲ್ಲಿ 1500 ಅಡಿಗಳಷ್ಟು ಕೊಳವೆಬಾವಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಇದೆ. ಆದರೆ ತೀರ್ಥಬಂಡೆಹಟ್ಟಿ ತೀರ್ಥಗಿರೀಶ್ವರಸ್ವಾಮಿ ದೇವಾಲಯದ ಒಳ ಆವರಣದಲ್ಲಿರುವ ನೀರಿನ ಚಿಲುಮೆಯಲ್ಲಿ ಎಂತಹ ಬರಗಾಲದಲ್ಲೂ ನೀರು ಬರಿದಾಗುವುದಿಲ್ಲ. ಬೇಸಿಗೆ, ಚಳಿಗಾಲ ಅಥವಾ ಮಳೆಗಾಲವಿರಲಿ, ನಿತ್ಯವೂ ದೇವಾಲಯದ ಚಿಲುಮೆಯಲ್ಲಿ ಎಷ್ಟೇ ನೀರು ತೆಗೆದರೂ ಅಷ್ಟು ನೀರು ಬರುತ್ತಿರುತ್ತದೆ. ಈ ರೀತಿಯಾಗಿ ಉದ್ಭವಿಸುವ ತೀರ್ಥವು ಬಹಳ ಪರಿಶುದ್ಧವಾಗಿದ್ದು, ನೀರನ್ನು ಉಪಯೋಗಿಸುವುದರಿಂದ ಹಲವಾರು ರೀತಿಯ ರೋಗಗಳು ವಾಸಿಯಾಗುತ್ತಿವೆ. ತೀರ್ಥ ಸೇವನೆ ಮಾಡುವುದರಿಂದ ದೀರ್ಕಾಲದಿಂದ ಸಂತಾನವಿಲ್ಲದರು ಸಂತಾನ ಪಡೆಯಬಹುದಾಗಿದೆ, ಚರ್ಮ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ರೋಗ ವಾಸಿಯಾಗುವುದು ಎಂಬ ನಂಬಿಕೆಯಿದೆ.

ಹಿಂದಿನ ಕಾಲದಲ್ಲಿ ದೇವಾಲಯದ ಬಳಿ ಪ್ರತಿ ಸೋಮವಾರ ಸಂತೆ ನಡೆಯುತ್ತಿತ್ತು. ತಮಿಳುನಾಡು ಸೇರಿ 44 ಪಾಳೆಪಟ್ಟಿನ ಗ್ರಾಮಸ್ಥರು ಇಲ್ಲಿಗೆ ಆಗಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂಬುದನ್ನು ಇಲ್ಲಿರುವ ಕಲ್ಲಿನ ಮಂಟಪಗಳು ಸಾಕರಿಸುತ್ತವೆ. ಅಂತಹ ಸಮಯದಲ್ಲಿ ಇಲ್ಲಿ ಉದ್ಬವಿಸುವ ನೀರನ್ನು ಜನತೆ ಸೇವಿಸಿ ದಾಹ ತೀರಿಸಿಕೊಳ್ಳುತ್ತಿದ್ದರು.

ಪೂಜಾ ಕಾರ್ಯಕ್ರಮಗಳು: ಪ್ರತಿವರ್ಷ ತೀರ್ಥಗಿರೀಶ್ವರ ರಥೋತ್ಸವ ನಡೆಯುತ್ತಿತ್ತು. ಆದರೆ ಸಂತೆ ಹಾಗೂ ಬ್ರಹ್ಮ ರಥೋತ್ಸವವು ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದೆ. ಪ್ರತಿ ಸೋಮವಾರ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ್ಯಗಳು ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ಹಲವಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸುತ್ತಾರೆ. ಮಹಾ ಶಿವರಾತ್ರಿಯಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ತಾಲೂಕಿನವರಲ್ಲದೆ, ತಮಿಳುನಾಡಿನ ಬಹುತೇಕ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದೇವಾಲಯದಲ್ಲಿ ಉದ್ಬವಿಸುವ ಗಂಗಾ ತೀರ್ಥ ಸೇವಿಸಿ ಪುನೀತರಾಗುತ್ತಾರೆ.

ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ, ಮಾರಿಯಮ್ಮ ಹಾಗೂ ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಸಮೀಪದ ತೀರ್ಥಬಂಡಹಟ್ಟಿ ಶಿವನ ದೇವಾಲಯಗಳು 1536ರಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತೀರ್ಥಬಂಡಹಟ್ಟಿ ಸೂಳಗಿರಿ ಮತ್ತು ಹಂಸಗಿರಿ ಪಾಳೆಗಾರರ ವಶದಲ್ಲಿತ್ತು ಎನ್ನಲಾಗಿದ್ದು, 1836ರಲ್ಲಿ ಪಾಳೆಪಟ್ಟಿನ ಮಹಾರಾಣಿ ಚನ್ನಮ್ಮ ರಾಣಿ ಆಳ್ವಿಕೆಯ ಅವಧಿಯಲ್ಲಿ ಅರ್ಚಕರ ಮುತ್ತಾತ ಶಿವರಾಮ ಭಟ್ಟರಿಗೆ ಧಾನವಾಗಿ ನೀಡಿರುವುದಾಗಿ ದಾನಪತ್ರದಲ್ಲಿ ಉಲ್ಲೇಖವಾಗಿದೆ. ಸುಬ್ಬರಾಯಶಾಸಿ, ಅರ್ಚಕ