ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  
ಜಿಲ್ಲೆ

ತಿರುಪತಿ ಲಡ್ಡುವಿಗೆ ಹಸುವಿನ ಕೊಬ್ಬು ಸೇರಿಸಿದ್ದು ರಾಕ್ಷಸಿ ಪ್ರವೃತ್ತಿ

ಶಿವಮೊಗ್ಗ: ಆಂಧ್ರಪ್ರದೇಶದ ತಿರುಪತಿ ಲಡ್ಡುವಿಗೆ ಹಸುವಿನ ಕೊಬ್ಬು, ಮೀನಿನ ಎಣ್ಣೆ ಸೇರಿಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ತಿರುಪತಿ ಲಡ್ಡು ಕೇವಲ ಪ್ರಸಾದವಲ್ಲ. ಅದು ಭಕ್ತಿಯ ಒಂದು ರೂಪ. ವಿಶ್ವದ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ಆಗಿದೆ. ಪ್ರಸಾದಕ್ಕೆ ಕೊಬ್ಬು ಸೇರಿಸುವಂತಹ ರಾಕ್ಷಸಿ ಪ್ರವೃತ್ತಿಗೆ ಯಾರೂ ಕೂಡ ಇಳಿಯಬಾರದಾಗಿತ್ತು. ಆದರೆ ಆಂಧ್ರದ ಮಾಜಿ ಸಿಎಂ ಜಗನ್‌ಮೋಹನ್‌ರೆಡ್ಡಿ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಖೇದರಕರ ಸಂಗತಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಜಗನ್ ಮೋಹನ್‌ರೆಡ್ಡಿ ಮತಾಂತರಗೊಂಡ ಕ್ರಿಶ್ಚಿಯನ್. ಅವರ ಆಡಳಿತ ಅವಧಿಯಲ್ಲಿ ತಿರುಪತಿ ಲಡ್ಡುವಿಗೆ ಹಿಂದುಗಳ ಗೋಮಾತೆಯಾದ ಹಸುವಿನ ಕೊಬ್ಬು, ಮೀನಿನ ಎಣ್ಣೆ ಸೇರಿಸಿದ್ದಾರೆಂಬುದು ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ. ಇದು ಅತ್ಯಂತ ದುರದೃಷ್ಟಕರ. ಕೂಡಲೇ ಅವರು ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೃತ್ಯದಲ್ಲಿ ಯಾವ ಯಾವ ಕ್ರೈಸ್ತ ಮಿಷನರಿಗಳು ಕೆಲಸ ಮಾಡಿವೆ ಎಂಬುದನ್ನು ಹೊರ ತರಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವಾಗಿದ್ದು ಇಡೀ ಹಗರಣವನ್ನು ಬೆಳಕಿಗೆ ತಂದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸುವುದಾಗಿ ಈಶ್ವರಪ್ಪ ಹೇಳಿದರು. ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಎಸ್.ಜಿ.ಬಾಲು, ಶಿವಾಜಿ, ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.