ಚಾಮರಾಜನಗರ: ಮಲೆ ಮಹದೇಶ್ವರ ಜಾನಪದ ಕಾವ್ಯದಲ್ಲಿ ಏನೂ ಅರಿಯದ ಕೊಂಗರು ಎಂದು ತಿರಸ್ಕಾರಕ್ಕೆ ಒಳಗಾಗಿದ್ದ, ಒಂದುಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ಮತ್ತು ಸಹಚರರ ನೆಲೆಯಾಗಿ ಕುಖ್ಯಾತಿಗೆ ಕಾರಣವಾಗಿದ್ದ ಕಾಡಂಚಿನ ‘ಪೊನ್ನಾಚಿ’ ಗ್ರಾಮವೀಗ ಕವಿಗಳು, ಕಥೆಗಾರರು ಹಾಗೂ ಕಾದಂಬರಿಕಾರರ ನೆಲೆಯಾಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಹೊಂದಿಕೊಂಡಂತೆ ಇರುವ ‘ಪೊನ್ನಾಚಿ’ ಗ್ರಾಮಕ್ಕೆ ಮಲೆಮಹದೇಶ್ವರ ಜಾನಪದ ಕಾವ್ಯದಲ್ಲಿ ಖಳನಾಯಕನ ಸ್ಥಾನವಿದೆ. ಅದಕ್ಕೆ ಪುಷ್ಠಿ ನೀಡುವಂತೆ ಮೀಣ್ಯದ ಕವಿ ಗುರುಸಿದ್ಧ ಅವರು, ಈ ಗ್ರಾಮದಲ್ಲಿ ವಾಸಿಸುವವರು ಕೊಂಗರು, ಏನನ್ನೂ ಅರಿಯದವರು ಎಂದು ತಿರಸ್ಕಾರ ಭಾವದಿಂದ ಕರೆದಿದ್ದರು. ಕಾಡುಗಳ್ಳ ವೀರಪ್ಪನ್ ಅಟ್ಟಹಾಸ ಮೆರೆಯುತ್ತಿದ್ದ ಕಾಲದಲ್ಲಿ, ಪೊನ್ನಾಚಿಯನ್ನು ಕಾಡುಗಳ್ಳರ ತಾಣ ಎಂದೇ ಗುರುತು ಮಾಡುತ್ತಿದ್ದರು. ಆದರೀಗ ಪ್ರಕೃತಿಯ ರಮಣೀಯ ಸೌಂದರ್ಯದ ನಡುವೆ ಇರುವ ಈ ಗ್ರಾಮದಲ್ಲಿ ಹಲವಾರು ಕವಿಗಳು, ಕಥೆಗಾರರು, ಕಾದಂಬರಿಕಾರರು ಹಾಗೂ ರಂಗಕರ್ಮಿಗಳು ಆವರಿಸಿಕೊಂಡು ಪೊನ್ನಾಚಿ ಹೆಸರು ರಾಜ್ಯದಲ್ಲೇ ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.
ಗ್ರಾಮದ ಸೋಮಶೇಖರ್ ಪೊನ್ನಾಚಿ ಎಂಬುವವರು ಮೊದಲು ಭಾವಗೀತೆಗಳನ್ನು ರಚನೆ ಮಾಡುವ ಮೂಲಕ ಈ ನವ ಪರಂಪರೆಗೆ ನಾಂದಿಯಾಡಿದರು. ಬಳಿಕ ಕವಿ ಅಸ್ತೂರ್ ನಂದೀಶ್, ಶಿವಕುಮಾರ್, ಖ್ಯಾತ ಕಥೆಗಾರ ಸ್ವಾಮಿ ಪೊನ್ನಾಚಿ, ಕಾದಂಬರಿಕಾರ ಪ್ರಕಾಶ್ ಪೊನ್ನಾಚಿ, ಕಬ್ಬಾಳಪ್ಪ ಮಠದೂರು, ಪೀಟರ್ ಪೊನ್ನಾಚಿ, ಸತೀಶ್ ಪೊನ್ನಾಚಿ, ಪ್ರಕಾಶ್ ಅಸ್ತೂರ್ ಈಗೇ ಕವಿಗಳು, ಕಥೆಗಾರರು, ಕಾದಂಬರಿಕಾರರು ಹಾಗೂ ರಂಗಕರ್ಮಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇವರಲ್ಲಿ ಕೆಲವರ ಸಾಹಿತ್ಯ ರಾಜ್ಯಮಟ್ಟದಲ್ಲಿ ಸಾಕಷ್ಟು ಸದ್ದುಮಾಡುತ್ತಿದ್ದು, ತಮ್ಮೊಟ್ಟಿಗೆ ಪೊನ್ನಾಚಿ ಗ್ರಾಮದ ಹಿರಿಮೆಯನ್ನು ಸಾರುತ್ತಿದೆ. ಈ ಮೂಲಕ ಇತಿಹಾಸದಲ್ಲಿ ತಿರಸ್ಕಾರ ಮತ್ತು ಕುಖ್ಯಾತಿಯನ್ನು ಪಡೆದುಕೊಂಡಿದ್ದ ಗ್ರಾಮವೀಗ, ಮಾನವ ಜನಾಂಗಕ್ಕೆ ಮೌಲ್ಯವನ್ನು ಉಣಬಡಿಸುವ ಸಾಹಿತಿಗಳ ತಾಣವಾಗಿ ಬದಲಾಗಿದೆ.
‘ಧೂಪದಮಕ್ಕಳು’ ಗೌರವ ತಂದುಕೊಟ್ಟರು:
ಶಿಕ್ಷಕರು ಆಗಿರುವ ಖ್ಯಾತ ಕಥೆಗಾರ ಸ್ವಾಮಿ ಪೊನ್ನಾಚಿ ಅವರು ರಚಿಸಿದ ‘ಧೂಪದಮಕ್ಕಳು’ ಎಂಬ ಕಥಾಸಂಕಲನ 2020 ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಛಂದ ಪುಸ್ತಕ ಬಹುಮಾನ ಹಾಗೂ ಇನ್ನಿತರೆ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಪೊನ್ನಾಚಿ ಗ್ರಾಮಕ್ಕೆ ಗೌರವವನ್ನು ತಂದುಕೊಟ್ಟಿತು. ಸ್ವಾಮಿ ಪೊನ್ನಾಚಿ ಅವರು ‘ಸಾವೊಂದನ್ನು ಬಿಟ್ಟು’ ಎಂಬ ಕವನ ಸಂಕಲನ, ‘ಕಾಡು ಹುಡುಗನ ಹಾಡು-ಪಾಡು’ ಎಂಬ ಅನುಭವ ಕಥನ ಮತ್ತು ‘ದಾರಿ ತಪ್ಪಿಸುವ ಗಿಡ’ ಕಥಾ ಸಂಕಲನವನ್ನು ರಚಿಸಿದ್ದಾರೆ. 2023ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ ‘ದಾರಿ ತಪ್ಪಿಸುವ ಗಿಡ’ ಕೃತಿ ಆಯ್ಕೆಯಾಗಿತ್ತು. ಇವರ ಕವಿತೆ, ಕಥೆಗಳು ಸಿನಿಮಾದ ರೂಪವನ್ನು ಪಡೆಯುತ್ತಿದ್ದು, ಸ್ನಾತಕೋತ್ತರ ಪದವಿ ಮತ್ತು ಪದವಿ ತರಗತಿಗಳಿಗೆ ಪಠ್ಯವಾಗಿದೆ. ಇತ್ತೀಚೆಗೆ ‘ಇಂಡಿಗನತ್ತಾ’ ಕಾದಂಬರಿಯನ್ನು ಸಿದ್ಧಪಡಿಸುತ್ತಿದ್ದಾರೆ.
ಪ್ರಕಟಣೆಗೆ ಸಿದ್ಧವಾಗಿರುವ ಪುಸ್ತಕಗಳು:
ಪೊನ್ನಾಚಿ ಗ್ರಾಮದ ಸಾಹಿತಿ ಶಿವಕುಮಾರ್ ಅವರು ‘ಗೂಳಿ ಮದ್ದು’ ಎಂಬ ಕಾದಂಬರಿಯನ್ನು ರಚಿಸಿದ್ದು, ಪ್ರಕಟಣೆಗೆ ಸಿದ್ಧವಾಗಿದೆ. ಪ್ರಕಾಶ್ ಪೊನ್ನಾಚಿ ಅವರ ‘ಗಾಂಧಿ ಜೋಡಿನ ಮಳಿಗೆ’ ಎಂಬ ಕಥಾಸಂಕಲನ ಹಾಗೂ ಪ್ರಕಾಶ್ ಅಸ್ತೂರ್ ಅವರ ‘ಕಾಡು ತೊರೆದ ನದಿ’ ಎಂಬ ಕವನ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ. ಪೀಟರ್ ಪೊನ್ನಾಚಿ ಅವರು ಮೂರು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಅವರ ಒಂದು ಕಥೆ ಸ್ವಾತಂತ್ರೋತ್ಸವ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದುಕೊಂಡಿದೆ.
ರಾಜ್ಯದಲ್ಲೇ ಪ್ರಥಮ:
ಪೊನ್ನಾಚಿ ಗ್ರಾಮದ ಮೂವರು ಕವಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಧನಸಹಾಯವನ್ನು ಪಡೆದುಕೊಂಡಿರುವುದು ಬಹುಶಃ ರಾಜ್ಯದಲ್ಲೇ ಪ್ರಥಮವಾಗಿದೆ. ಪ್ರಕಾಶ್ ಪೊನ್ನಾಚಿ ಅವರ ಮಣ್ಣಿಗೆ ಬಿದ್ದ ಮಳೆ, ಸ್ವಾಮಿ ಪೊನ್ನಾಚಿ ಅವರ ಸಾವೊಂದನ್ನು ಬಿಟ್ಟು ಹಾಗೂ ಚೇತನ್ ಪೊನ್ನಾಚಿ ಅವರ ಮುತ್ತುಗದ ನತ್ತು ಎಂಬ ಮೂರು ಕವನ ಸಂಕಲನಗಳು 2015 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಧನಸಹಾಯವನ್ನು ಪಡೆದುಕೊಂಡಿದ್ದವು. ಈ ಕವನ ಸಂಕಲನಗಳು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದವು. ಪ್ರಸ್ತುತ ಕಥಾ ಸಂಕಲನಗಳು ಕೂಡ ಸದ್ದು ಮಾಡುತ್ತಿದ್ದು, ಪೊನ್ನಾಚಿ ಗ್ರಾಮದಲ್ಲಿ ಕಥೆಗಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಪೊನ್ನಾಚಿ ಗ್ರಾಮದ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಅದಲ್ಲದೇ ಆ ಕಾಲದಲ್ಲೇ ನಮ್ಮ ಗ್ರಾಮದ ಹಿರಿಯರು ಜೈಮಿನಿ ಭಾರತ, ಯಕ್ಷಗಾನವನ್ನು ಓದಿಕೊಂಡಿದ್ದರು. ಇವೆಲ್ಲವೂ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿತು.
&ಸ್ವಾಮಿ ಪೊನ್ನಾಚಿ, ಕಥೆಗಾರ, ಚಾಮರಾಜನಗರ