ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹು-ಧಾ ಸೆಂಟ್ರಲ್ ಬಿಜೆಪಿ ವತಿಯಿಂದ ವಿದ್ಯಾನಗರ ಶಿರೂರ ಪಾರ್ಕ್ನಲ್ಲಿ ಶನಿವಾರ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವಾಸಿಗಳು ಶುಕ್ರವಾರ ಒಂದೇ ದಿನ 1 ಕೋಟಿ ಧ್ವಜ ಖರೀದಿಸಿದ್ದಾರೆ. ಪ್ರಧಾನಿಯವರ ಕರೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.
ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಇಂದು ಎಲ್ಲ ವರ್ಗದ ಜನರಲ್ಲಿ ರಾಷ್ಟ್ರ ಹಾಗೂ ರಾಷ್ಟ್ರಧ್ವಜದ ಬಗ್ಗೆ ಅಭಿಮಾನ ಕಾಣುತ್ತಿದ್ದೇವೆ. ಜನರಲ್ಲಿನ ದೇಶಭಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಹರ್ ಘರ್ ತಿರಂಗಾ ಅಭಿಯಾನವು ದೇಶಭಕ್ತಿಗೆ ಇನ್ನಷ್ಟು ಸ್ಪೂರ್ತಿ ತುಂಬಲಿದೆ ಎಂದು ಹೇಳಿದರು.
ಎಂಎಲ್ಸಿ ಪ್ರದೀದ ಶೆಟ್ಟರ್, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉಪ ಮೇಯರ್ ಉಮಾ ಮುಕುಂದ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಕಿಶನ ಬೆಳಗಾವಿ, ರೂಪಾ ಶೆಟ್ಟಿ, ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ, ಮಹೇಶ ಬುರ್ಲಿ, ಮಹೇಂದ್ರ ಕೌತಾಳ, ರಿಯಾಜ ಬಸರಿ, ಇತರರು ಇದ್ದರು
ತಿರಂಗಾ ಯಾತ್ರೆಯಲ್ಲಿ ಚೇತನ ವಿಜ್ಞಾನ ಪಿಯು, ಐಬಿಎಂಆರ್, ಪಿ.ಸಿ. ಜಾಬಿನ ವಿಜ್ಞಾನ ಪಿಯು ಕಾಲೇಚ್ನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿರೂರ ಪಾರ್ಕ್ ಚೇತನ ಕಾಲೇಜಿನಿಂದ ಆರಂಭಗೊಂಡ ರ‍್ಯಾಲಿ ಹೊಸೂರು ಮಾರ್ಗವಾಗಿ ಕಿಮ್್ಸ ಎದುರಿನ ಗಾಂಧಿ ಪ್ರತಿಮೆ ಬಳಿ ಕೊನೆಗೊಂಡಿತು. ವಿದ್ಯಾರ್ಥಿಗಳು ಕೈಲಿಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು. ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೊಷಣೆಗಳನ್ನು ಕೂಗುತ್ತ ಸಾಗಿದರು. ತೆರೆದ ವಾಹನದಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಇಡಲಾಗಿತ್ತು.
---