ಬಾಗಲಕೋಟೆ: ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಬರೀ ದೂರ ಸಾಲದು, ಮೊದಲು ಎಫ್ಐಆರ್ ದಾಖಲಿಸಲು ಮುಂದಾಗಬೇಕು. ಎಫ್ ಐಆರ್ ಆಗದೇ ರಾಜೀನಾಮೆ ಕೊಡಬೇಕು ಎಂದು ನಾನು ಹೇಳಲ್ಲ. ಆರೋಪವನ್ನು ಗಮನಿಸಿ ಮೊದಲು ಅವರ ವಿರುದ್ಧ ಎಫ್ಐಆರ್ ದಾಖಲಿಸಲಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.
ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್ಐಆರ್ ಬಿದ್ದ ಮೇಲೆ ಸಿಎಂ ಆಗಲಿ, ಸಚಿವರಾಗಲಿ ಆ ಸ್ಥಾನದಲ್ಲಿ ಮುಂದುವರೆಯಬಾರದು ಎಂದರು.
ಹಿಂದೆ ನನ್ನ ಮೇಲೆ ಎಫ್ ಐಆರ್ ಆದ ತಕ್ಷಣ ಇದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ದೊಡ್ಡ ಮೆರವಣಿಗೆ ಮಾಡಿದರು. ರಾಜೀನಾಮೆ ಕೊಡಿ, ಕ್ಲೀನ್ ಚೀಟ್ ಸಿಕ್ಕ ಬಳಿಕ ಮತ್ತೆ ಸಚಿವರಾಗಿ ಎಂದಿದ್ದರು. ಆದರೆ, ಇದ್ಯಾವುದನ್ನು ನೋಡದೇ ನಾನು ಕೇಂದ್ರ ನಾಯಕರ ಅನುಮತಿ ಪಡೆದು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ತನಿಖೆ ಬಳಿಕ ನನಗೆ ಕ್ಲೀನ್ ಚೀಟ್ ಸಿಕ್ಕಿತ್ತು.
ಈಗ ಸಿದ್ದರಾಮಯ್ಯ, ಡಿಕೆಶಿ, ತಿಮ್ಮಾಪುರ ಅವರಿಗೆ ಒಂದೊಂದು ಕಾನೂನು ಇದೆಯಾ? ಆಪಾದನೆ ಬಂದ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಇದನ್ನು ಮಾಡುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ತನಿಖೆ ಆರಂಭವಾಗಿರುವ ಮೊದಲ ಮುಖ್ಯಮಂತ್ರಿ ಇವರು. ತಕ್ಷಣವೇ ಅವರು ತಪ್ಪಿತಸ್ಥರು ಎಂದು ನಾನು ಹೇಳಲ್ಲ. ಆದರೆ, ಆರೋಪ ಬಂದಾಗ ಬೇರೆಯವರ ರಾಜೀನಾಮೆಗಾಗಿ ಮೆರವಣಿಗೆ ಮಾಡಿದವರು ಈಗ ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದೇ ಹೇಗೆ ಹೋಗುತ್ತಾರೆ? ರಾಜೀನಾಮೆ ಕೊಡದೇ ಇರುವುದು ಸಿಎಂ ಭಂಡತನ. ಇದು ಬಹಳ ದಿನ ನಡೆಯಲ್ಲ. ಭಗವಂತ ಶಾಪ ಕೊಡಲು ಇವರು ಒಂದೊಂದೇ ತಪ್ಪು ಮಾಡುತ್ತಿದ್ದಾರೆ. ಮುಡಾ ಆಯ್ತು, ಈಗ ವಕ್ ಬಂದಿದೆ. ಇದಕ್ಕೆ ಎಷ್ಟು ಜನ ಸಾಧು ಸಂತರು ಸಿದ್ದರಾಮಯ್ಯ ಅವರಿಗೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಸಾಧು ಸಂತರ ಶಾಪ ಹಾಕಿಕೊಳ್ಳಬೇಡಿ ಎಂದು ಈಶ್ವರಪ್ಪ ಸಲಹೆ ನೀಡಿದರು.