ಜಿಲ್ಲೆ

ತಿಂದೋರು ಎಲೆಯ ಬಿಸಾಡೊ ಹಾಗೆ..!?

ಚಾಮರಾಜನಗರ: ಗಡಿಜಿಲ್ಲೆಯಲ್ಲಿ ಕರುಳ ಬಳ್ಳಿಯ ನವಿರಾದ ನಂಟಿಗೆ ಕೊಳ್ಳಿ ಇಡುವ ಅಮಾನವೀಯ ಕೃತ್ಯಗಳು ಮುಂದುವರೆಯುತ್ತಲೇ ಇವೆ. ತೂಗೊ ತೊಟ್ಟಿನಲ್ಲಿ ಇರಬೇಕಾದ ಎಳೆಯ ಜೀವಗಳು ತಿಪ್ಪೆ ತೊಟ್ಟಿಯಲ್ಲಿ ಸಿಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ತಿಂದೋರು ಎಲೆಯ ಬಿಸಾಡೊ ಹಾಗೆ ಹೆತ್ತವರೇ ನವಜಾತ ಶಿಶುಗಳನ್ನು ಬೀದಿಬದಿಯಲ್ಲಿ ಇಟ್ಟು ಹೋಗುತ್ತಿದ್ದಾರೆ.

ಜು.19ರಂದು ಚಾಮರಾಜನಗರ ತಾಲೂಕಿನ ಸಾಗಡೆ-ತಮ್ಮಡಹಳ್ಳಿ ಗ್ರಾಮಗಳ ನಡುವಿನ ರಸ್ತೆ ಬದಿಯಲ್ಲಿ ಹುಟ್ಟಿ 15 ದಿನಗಳಷ್ಟೇ ಆಗಿರುವ ಹೆಣ್ಣು ಮಗು ಸಿಕ್ಕಿತ್ತು. ಪ್ರಸ್ತುತ ಮಗು ಜಿಲ್ಲಾಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದು, ಇದು ಇತ್ತೀಚೆಗಿನ ಉದಾಹರಣೆಯಷ್ಟೆ. ಜಿಲ್ಲೆಯಲ್ಲಿ ಇಂತಹ ಹಲವಾರು ಅಮಾನವೀಯ ಘಟನೆಗಳು ನಡೆದುಹೋಗಿವೆ. ಚಾಮರಾಜನಗರ, ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕುಗಳಲ್ಲಿ ಹಸುಗೂಸುಗಳನ್ನು ರಸ್ತೆ ಬದಿ, ಆಸ್ಪತ್ರೆ ಆವರಣ, ಚರಂಡಿ ಬಳಿ, ಕಸದ ತೊಟ್ಟಿ, ಬಸ್ ನಿಲ್ಲಾಣಗಳಲ್ಲಿ ಇಟ್ಟು ಹೋಗಲಾಗಿದೆ. ಮುದ್ದು ಕಂದಮ್ಮಗಳ ಸಾವಿನ ಪ್ರಕರಣಗಳೂ ಸಂಭವಿಸಿವೆ.

ಎಲ್ಲೆಲ್ಲಿ ಹೀಗಾಗಿದೆ?:

2014 ಡಿ.22ರಂದು ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆಯಾಗಿತ್ತು. ಇದು ಹುಟ್ಟಿ ಕೇವಲ 3 ದಿನಗಳಾಗಿತ್ತು. 2017ರ ಸೆ.17ರಲ್ಲಿ ನಗರದ ಜಿಲ್ಲಾಸ್ಪತ್ರೆ ಆವರಣದ ಸೈಕಲ್ ನಿಲ್ದಾಣದಲ್ಲಿ ಗಂಡು ಮಗುವನ್ನು ಇಟ್ಟು ಹೋಗಲಾಗಿತ್ತು. 2018 ಏ.14ರಲ್ಲಿ ಗುಂಡ್ಲುಪೇಟೆ ಪಟ್ಟಣದ ಚರಂಡಿ ಬಳಿ ಹೆಣ್ಣು ಮಗು ಪತ್ತೆಯಾಗಿತ್ತು. 2020ರ ೆ.3 ರಂದು ನಗರದ ರಂಗನಾಥ ಕಲ್ಯಾಣ ಮಂಟಪದ ಬೀದಿಯಲ್ಲಿ ಮಗುವನ್ನು ಎಸೆದು ಹೋಗಲಾಗಿತ್ತು.

2020ರ ಡಿ.4ರಂದು ಹನೂರು ತಾಲೂಕಿನ ಎಲ್ಲೇಮಾಳ ರಸ್ತೆ ಬದಿಯಲ್ಲಿ ಹೆಣ್ಣು ಮಗವನ್ನು ಬಾಕ್ಸ್‌ನಲ್ಲಿ ಇಟ್ಟು ಹೋಗಲಾಗಿತ್ತು. 2022ರಲ್ಲಿ ಹನೂರಿನ ಬಸ್ ನಿಲ್ದಾಣದಲ್ಲಿ ಒಂದು ವಾರದ ಗಂಡು ಮಗು ಬ್ಯಾಗ್‌ನೊಳಗೆ ಸಿಕ್ಕಿತ್ತು. ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರ ಬಸ್ ನಿಲ್ದಾಣದಲ್ಲಿ ಮಗುವನ್ನು ಇಟ್ಟು ತಾಯಿ ಹೊರಟುಹೋಗಿದ್ದಳು. ಗ್ರಾಮಸ್ಥರು ಮಗುವಿನ ತಾಯಿಯನ್ನು ಇದೇ ಗ್ರಾಮದವರೆಂದು ಪತ್ತೆ ಮಾಡಿದರು. ಪೊಲೀಸರು ಮಹಿಳೆಗೆ ಬುದ್ಧಿ ಹೇಳಿ ಮಗುವನ್ನು ಕೊಟ್ಟು ಕಳುಹಿಸಿದ್ದರು.

2023ರಲ್ಲಿ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಶೌಚಗೃಹಕ್ಕೆ ಹೋಗುತ್ತೇನೆಂದು ವೃದ್ಧೆಗೆ ಹೆಣ್ಣು ಮಗುವನ್ನು ಕೊಟ್ಟು ಹೋಗಿದ್ದ ಮಹಿಳೆ ವಾಪಸ್ ಬರಲಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ಬೆರಳಣಿಕೆಯಷ್ಟರಲ್ಲಿ ಮಾತ್ರ ಪಾಲಕರ ಪತ್ತೆಯಾಗಿದೆ.

ಹಸುಗೂಸುಗಳ ಅಮಾನವೀಯ ಸಾವು:

ಜಿಲ್ಲೆಯಲ್ಲಿ ನವಜಾತ ಶಿಶುಗಳು ಬಿಟ್ಟು ಹೋಗುವುದಕ್ಕಷ್ಟೇ ಸಮೀತವಾಗಿಲ್ಲ. ಅಮಾನವೀಯವಾಗಿ ಸತ್ತಿವೆ.

2021ರ ಜೂ.11ರಂದು ಹನೂರು ತಾಲೂಕಿನ ಕಾಮಗೆರೆಯ ಖಾಸಗಿ ಆಸ್ಪತ್ರೆಯ ಬಳಿಯ ತೊಟ್ಟಿಯಲ್ಲಿ ಅಂಗವೈಕಲ್ಯತೆ ಕಾರಣಕ್ಕೆ 8ರಿಂದ 10 ದಿನಗಳ ಗಂಡು ಮಗುವನ್ನು ಹೆತ್ತವರು ಖಾಲಿ ನೀರಿನ ತೊಟ್ಟಿಯಲ್ಲಿ ಎಸೆದು ಹೋಗಿದ್ದಾರೆ. ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. 2021ರ ಡಿ.5ರಂದು ಕೊಳ್ಳೇಗಾಲ ಪಟ್ಟಣದ ಚರಂಡಿಯಲ್ಲಿ ತಾಯಿ ಕರುಳ ಬಳ್ಳಿ ಸಹಿತ ಮೃತ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಸ್ಥಳೀಯರು ಚರಂಡಿಯಲ್ಲಿ ಮಾಂಸದ ಮುದ್ದೆಯಂತಿದ್ದ ನವಜಾತ ಶಿಶು ಇದ್ದುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. 2025ರ ಮೇ 12ರಂದು ಹರಳೆ ಗ್ರಾಮದಲ್ಲಿ ನದಿ ನೀರಿನಲ್ಲಿ ನವಜಾತ ಶಿಶುವಿನ ಶವ ತೇಲುತ್ತಿತ್ತು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಸೆರೆ ಸಿಕ್ಕಿರುವುದು ಕಡಿಮೆ.

ಇದಕ್ಕೆ ಕಾರಣವೇನು?:

ನವಜಾತ ಶಿಶುಗಳನ್ನು ಬಿಟ್ಟು ಹೋಗಲು ಹಲವು ಕಾರಣಗಳಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿವಾಹ ಪೂರ್ವ ಲೈಂಗಿಕ ಸಂಬಂಧದಿಂದ ಜನಿಸಿದ ಮಕ್ಕಳು ಈ ರೀತಿ ಅನಾಥವಾಗುತ್ತದೆ. ಅನೈತಿಕ ಸಂಬಂಧದಲ್ಲಿ ಹುಟ್ಟಿದ ಮಕ್ಕಳೂ ಹೀಗೆ ಬೀದಿಪಾಲಾಗುತ್ತವೆ. ಅಂಗವಿಕಲ ಮಗು ಜನಿಸಿದರೆ ಸಾಕಲು ಆಗದೆ ಎಲ್ಲೆಂದರಲ್ಲಿ ಇಟ್ಟು ಹೋಗಿರುವ ಘಟನೆಗಳು ನಡೆದಿವೆ. ಹೆಣ್ಣು ಸಮಾಜದ ಸೃಷ್ಟಿಯ ಕಣ್ಣು. ಆದರೆ ಹೆಣ್ಣು ಮಗು ಎಂಬ ಕಾರಣಕ್ಕೂ ಮಗುವನ್ನು ಬಿಟ್ಟು ಹೋಗಲಾಗುತ್ತದೆ. ಗಂಡ ಅಥವಾ ಹೆಣ್ಣು ಎಂಬ ಲೀಗಬೇಧ ಮಾಡದೆ ಮಗುವನ್ನು ಬೀದಿ ಪಾಲು ಮಾಡುವ ಬಡತನವೂ ಇಂತಹ ಘಟನೆಗಳ ಹಿಂದೆ ಪ್ರಮುಖವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಮತೆಯ ತೊಟ್ಟಿಲು ಅರಿವಾಗಲಿ:

ಮಮತೆಯ ತೊಟ್ಟಿಲು ಎಂಬ ಮಹತ್ವದ ಯೋಜನೆ ಇದೆ. ಇದು ಅನಾಥ, ನಿರ್ಗತಿಕ, ಪರಿತ್ಯಕ್ತ, ಪಾಲಕರಿಂದ ಒಪ್ಪಿಸಲ್ಪಟ್ಟ ಹಾಗೂ ತಿರಸ್ಕರಿಸಲ್ಪಟ್ಟ ಮಕ್ಕಳಿಗೆ ಕುಟುಂಬದ ವಾತಾವರಣವನ್ನು ನೀಡಿ ಪ್ರೀತಿ, ವಾತ್ಸಲ್ಯ, ರಕ್ಷಣೆ ಹಾಗೂ ಮುಂದಿನ ಭವಿಷ್ಯ ರೂಪಿಸಲು ಈ ಯೋಜನೆ ಜಾರಿಯಲ್ಲಿದೆ. ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿರುವ ಸಖಿ ಕೇಂದ್ರಕ್ಕೆ ಮಗುವನ್ನು ಒಪ್ಪಿಸಬಹುದು ಅಥವಾ ಅಧಿಕಾರಿಗಳು, ವೈದ್ಯರು, ಶುಶ್ರೂಷಕರನ್ನು ಸಂಪರ್ಕಿಸಿ ಮಗುವನ್ನು ನೀಡಬಹುದು. ಪಾಲಕರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ.

ಈ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡುತ್ತದೆ. ಕೊಳ್ಳೇಗಾಲದಲ್ಲಿರುವ ಜೀವನ ಜ್ಯೋತಿ ಟ್ರಸ್ಟ್ ಪಾಲನೆ ಮಾಡುತ್ತದೆ. ದತ್ತು ಸ್ವೀಕಾರ ಕಾರ್ಯಕ್ರಮದಡಿ ಮಕ್ಕಳನ್ನು ಹಂಬಲಿಸುವವರಿಗೆ ದತ್ತು ನೀಡಲಾಗುತ್ತದೆ.

ಮಮತೆಯ ತೊಟ್ಟಿಲು ಯೋಜನೆ ಕುರಿತು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲೂ ಅರಿವು ಮೂಡಿಸಬೇಕು. ಹೆಚ್ಚು ಹೆರಿಗೆ ನಡೆಯುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮಮತೆಯ ತೊಟ್ಟಿಲನ್ನು ಇಡಬೇಕು. ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡುವ ಹಂತದಲ್ಲಿ ಕಷ್ಟ-ಸುಖಗಳನ್ನು ತಿಳಿದು ಮಗುವಿನ ಮುಂದಿನ ಭವಿಷ್ಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು.

ದೇಶ-ವಿದೇಶಗಳಿಗೆ ದತ್ತು:

ಅನಾಥ, ನಿರ್ಗತಿಕ, ಪರಿತ್ಯಕ್ತ, ಪಾಲಕರಿಂದ ಒಪ್ಪಿಸಲ್ಪಟ್ಟ ಹಾಗೂ ತಿರಸ್ಕರಿಸಲ್ಪಟ್ಟ ಮಕ್ಕಳು ದತ್ತು ಸ್ವೀಕಾರ ಕಾರ್ಯಕ್ರಮದಡಿ ದೇಶ-ವಿದೇಶಗಳಲ್ಲಿ ಹೊಸ ಬದುಕು ನಡೆಸುತ್ತಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿ ಪ್ರಕಾರ, ಅನಾಥ ಮಕ್ಕಳನ್ನು ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ, ಆಸ್ಟ್ರೇಲಿಯಾ, ಅಮೇರಿಕಾ, ಇಟಲಿಗೂ ದತ್ತು ತೆಗೆದುಕೊಂಡು ಚೆನ್ನಾಗಿ ಪಾಲನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಕ್ಕಳಿಲ್ಲದೆ ದತ್ತು ಸ್ವೀಕಾರ ಮಾಡಲು ಹಲವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿದ್ದಾರೆ. ಹಾದಿಬೀದಿಯಲ್ಲಿ ಮಗು ಬಿಟ್ಟು ಹೋಗುವ ಪ್ರಕರಣಗಳು ಮಕ್ಕಳಿಲ್ಲದವರ ಕರುಳನ್ನು ಹಿಂಡುತ್ತಿದೆ.

ಪಾಲಕರ ಮಡಿಲಿನಿಂದ 8 ಮಕ್ಕಳು: ನವಜಾತ ಶಿಶುಗಳನ್ನು ಬೀದಿಬದಿ ಇಡದೆ ಆಸ್ಪತ್ರೆಯಲ್ಲೇ ನೀಡಿರುವ 8 ಪ್ರಕರಣಗಳಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿ ಪ್ರಕಾರ, 2023-24ರಲ್ಲಿ 2, 2024-25ರಲ್ಲಿ 4, 2025ನೇ ಸಾಲಿನಲ್ಲಿ 2 ಮಕ್ಕಳನ್ನು ಪಾಲಕರು ಒಪ್ಪಿಸಿದ್ದಾರೆ. ಈ ಮಕ್ಕಳು ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಕ್ಕಳಿಲ್ಲದವರ ಮಡಿಲು ಸೇರಲಿವೆ. ಹಸಗೂಸುಗಳನ್ನು ಎಲ್ಲೆಂದರಲ್ಲಿ ಇಟ್ಟು ಹೋದರೆ ಅವುಗಳ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಚಾಮರಾಜನಗರದ ಬೀದಿಯೊಂದರಲ್ಲಿ ಬಿಟ್ಟು ಹೋಗಿದ್ದ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಇಂದಿಗೂ ತೊಂದರೆಯಾಗುತ್ತಿದೆ. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಯಲ್ಲಿ ಬಿಸಾಡಿ ಎಳೆಯ ಜೀವಗಳನ್ನು ಹಿಂಸಿಸಬಾರದು. ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಇಟ್ಟು ಮಗುವಿನ ಜೀವಿಸುವ ಹಕ್ಕನ್ನು ಗೌರವಿಸಬೇಕಾಗಿದೆ. ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ 1098/112ಗೆ ಕರೆ ಮಾಡಬಹುದು.

ಮಕ್ಕಳನ್ನು ಸಾಕಲು ಆಗದೆ ಇದ್ದವರು ಮಮತೆಯ ತೊಟ್ಟಿಲಿಗೆ ನೀಡಬಹುದು. ಪಾಲಕರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ. ಬಳಿಕ ಬೇರೆಯವರಿಗೆ ಕಾನೂನು ಬದ್ಧವಾಗಿ ದತ್ತು ನೀಡಲಾಗುತ್ತದೆ. ಚೆಲುವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಚಾಮರಾಜನಗರ