ಜಿಲ್ಲೆ

ತಿಂಡಿ ತಿನಿಸು ಮಾರಾಟ ಮಾಡಿದ ವಿದ್ಯಾರ್ಥಿಗಳು

ತಿ.ನರಸೀಪುರ: ತಾಲೂಕು ಸೋಸಲೆ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇತ್ತೀಚೆಗೆ ಆದರ್ಶ ಫುಡ್ ಅಂಡ್ ಫನ್ ಫೆಸ್ಟ್ ಕಾರ್ಯಕ್ರಮ ನಡೆಯಿತು.

ಗ್ರಾಹಕರ ಹಕ್ಕುಗಳ ರಕ್ಷಣೆ, ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವುದು, ಶುಚಿತ್ವದ ಮಹತ್ವ, ಮುಂತಾದ ಅಂಶಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಾಲೆಯ ಮಕ್ಕಳು ವಿವಿಧ ಬಗೆಯ ತಿನಿಸುಗಳ ಅಂಗಡಿಗಳನ್ನು ಹಾಗೂ ಮನೋರಂಜನ ಆಟಗಳನ್ನು ವಿಶೇಷವಾಗಿ ಸಜ್ಜುಗೊಳಿಸಿದ್ದರು.

ಸುಮಾರು 50 ರಿಂದ 55 ಸ್ಟಾಲ್‌ಗಳಲ್ಲಿ ಮಕ್ಕಳು ತಾವೇ ತಯಾರಿಸಿದ ವಿವಿಧ ಆಹಾರ ತಿಂಡಿಗಳ ಮಾರಾಟ ಮಾಡಿದರು ಹಾಗೂ ವಿವಿಧ ಮನರಂಜನಾತ್ಮಕ ಆಟಗಳನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದರು. ಕಾರ್ಯಕ್ರಮಕ್ಕೆ ಪಾಲಕರು ಆಗಮಿಸಿ, ವಿದ್ಯಾರ್ಥಿಗಳಿಂದ ತಿಂಡಿ ತಿನಿಸುಗಳನ್ನು ಖರೀದಿಸಿದರು ಹಾಗೂ ಮನರಂಜನಾತ್ಮಕ ಆಟಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ ಅವರು ಕಚೇರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳನ್ನು ಪ್ರೋತ್ಸಾಹಿಸಿದರು.

ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಸುಗ್ಗಿಯ ಪರಿಕಲ್ಪನೆಯ ಕಾರ್ಯಕ್ರಮದ ಉದ್ಘಾಟನೆಎನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜು ನೆರವೇರಿಸಿದರು. ಎಸ್‌ಡಿಎಂಸಿ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಕ್ಕಳನ್ನು ಹುರಿದುಂಬಿಸಿದರು. ಶಾಲೆಯ ಮುಖ್ಯ ಶಿಕ್ಷಕರ ಎಂ.ಪಿ.ಮಂಜಣ್ಣ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜನೆಯಾಗಿತ್ತು.