ಜಿಲ್ಲೆ

ತಿಂಗಳೊಳಗೆ ಮನೆ ನಿರ್ವಿುಸಲು ಸೂಚಿಸಿ

ಹಾವೇರಿ: ತಾಲೂಕಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿರುವ ಎ ಹಾಗೂ ಬಿ ವರ್ಗದ ಮನೆಗಳನ್ನು ತ್ವರಿತವಾಗಿ ನಿರ್ವಿುಸಿಕೊಳ್ಳಲು ಫಲಾನುಭವಿಗಳಿಗೆ ಸೂಚಿಸಬೇಕು. 1 ತಿಂಗಳೊಳಗೆ ತಾಲೂಕಿನಲ್ಲಿ ಬಿದ್ದಿರುವ ಮನೆಗಳ ನಿರ್ಮಾಣ ಕಾರ್ಯ ಮುಗಿಯದೇ ಇದ್ದರೆ ಪಿಡಿಒಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ಎಚ್ಚರಿಸಿದರು.

ನಗರದ ತಾಪಂ ಸಭಾಭವನದಲ್ಲಿ ನೆರೆಗೆ ಬಿದ್ದ ಮನೆಗಳ ನಿರ್ಮಾಣ ಕಾರ್ಯದ ಪರಿಶೀಲನೆ ಕುರಿತು ಬುಧವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಮೂರು ದಿನಗಳೊಳಗೆ ಎಲ್ಲ ಮನೆಗಳ ತಳಪಾಯ ಹಾಕಿಸಬೇಕು. ಫಲಾನುಭವಿಗಳು ಮನೆ ನಿರ್ವಣದ ಹಂತಗಳನ್ನು ಶೀಘ್ರದಲ್ಲಿಯೇ ಜಿಪಿಎಸ್ ಮಾಡಿ ವಸತಿ ನಿಗಮಕ್ಕೆ ಕಳಿಸಬೇಕು. ಸರ್ಕಾರದಿಂದ ಹಂತವಾರು ಅನುದಾನ ಬಿಡುಗಡೆಯಾಗಲಿದ್ದು, ನೀವು ವೆಬ್​ಸೈಟ್​ಗೆ ಫೋಟೋಗಳನ್ನು ಜಿಪಿಎಸ್ ಮೂಲಕ ಅಪ್​ಲೋಡ್ ಮಾಡದೇ ಇದ್ದಲ್ಲಿ ಅನುದಾನ ಬರುವುದಿಲ್ಲ. ಎಲ್ಲರೂ ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಆಶ್ರಯ ಮನೆಗಳ ನಿರ್ವಣಕ್ಕೆ ಮರಳಿನ ಕೊರತೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಮನೆ ನಿರ್ವಣಕ್ಕೆ ಮರಳಿನ ಕೊರತೆಯಿದ್ದರೆ ಕೂಡಲೇ ಪಟ್ಟಿ ಕೊಡಿ ಅವರಿಗೆ ಸರ್ಕಾರಿ ಮರಳು ಬ್ಲಾಕ್​ನಿಂದ ಮರಳು ಕೊಡಿಸಲಾಗುವುದು. ಮನೆ ಪ್ರಗತಿಯಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ವಹಿಸಿದರೆ ಪಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಅಲ್ಲದೆ, ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೂ ಮುಂದಾಗಬೇಕಾಗುತ್ತದೆ. ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ನಿರಾಸಕ್ತಿ ತೋರಿದ್ದರೆ ತಿಳಿಸಿ ನಾನು ಸ್ಥಳಕ್ಕೆ ಬಂದು ಅವರ ಮನವೊಲಿಸುತ್ತೇನೆ ಎಂದರು.

ತಾಪಂ ಇಒ ಬಸವರಾಜ ಡಿ.ಸಿ. ಹಾಗೂ ತಾಲೂಕಿನ ಎಲ್ಲ ಗ್ರಾಪಂಗಳ ಪಿಡಿಒಗಳು ಸಭೆಯಲ್ಲಿದ್ದರು.