ಮೂಡಿಗೆರೆ ನಳಂದ ಶಾಲೆಯಲ್ಲಿ ಪರಿಸರ ದಿನಾಚರಣೆ ಅರಿವು ಮೂಡಿಸಿದರು. ಡಾಲಿ, ಅಣ್ಣಪ್ಪ ನಾಯಕ್, ಅಕ್ಷತಾ, ಸ್ವಾತಿ, ಮೋಹಿತಾ, ಕಾವ್ಯಾ, ಜಯಪಾಲ್, ನಿರಂಜನ್ ಇತರರಿದ್ದರು. 
ಜಿಲ್ಲೆ

ತಿಂಗಳಿಗೊಂದು ಗಿಡ ನೆಡಿ

ಮೂಡಿಗೆರೆ: ಮಕ್ಕಳು ಮತ್ತು ಹಿರಿಯರು ಒಟ್ಟಿಗೆ ಸೇರಿ ಪ್ರತಿ ತಿಂಗಳೂ ಒಂದೊಂದು ಗಿಡ ನೆಟ್ಟರೆ ಅದು ಮರವಾಗಿ ಬೆಳೆದು ನೀರು, ನೆರಳಿನ ಜತೆ ವಿವಿಧ ರೀತಿಯಲ್ಲಿ ನಮಗೆಲ್ಲ ನೆರವಾಗುತ್ತದೆ ಎಂದು ಪಟ್ಟಣದ ನಳಂದ ಆಂಗ್ಲ ಮಾಧ್ಯಮ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಮೋಹಿತಾ ಹೇಳಿದರು.

ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಗಿಡ, ಮರಗಳನ್ನು ಕತ್ತರಿಸಿ ಪರಿಸರವನ್ನು ನಾಶ ಮಾಡಿದರೆ ನಮಗೆ ನಾವೇ ಗುಂಡಿ ತೋಡಿಕೊಂಡಂತಾಗುತ್ತದೆ. ಗಿಡ ನೆಟ್ಟು, ಪರಿಸರವನ್ನು ಉಳಿಸುವ ಬಗ್ಗೆ ಶಾಲಾ ಪಠ್ಯದಲ್ಲಿ ಓದಿಕೊಂಡಿದ್ದೇವೆ. ಅದನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಂಡರೆ ಪರಿಸರವನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಕಾವ್ಯಾ ಮಾತನಾಡಿ, ಮಲೆನಾಡು ಭಾಗದಲ್ಲಿ ಅತ್ಯುತ್ತಮ ಅರಣ್ಯ ಮತ್ತು ಪರಿಸರವಿದೆ. ಅದನ್ನು ಹಾಳುಗೆಡವಿದರೆ ಮತ್ತೆ ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ. ಇರುವ ಅರಣ್ಯ ಮತ್ತು ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಪಿಎಸ್‌ಐ ಶ್ರೀನಾಥ್ ರೆಡ್ಡಿ ಮಾತನಾಡಿ, ವಾಹನಗಳ ಸಂಚಾರ ಮತ್ತು ಮನೆಗಳ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗಿ ಅನೇಕ ರೀತಿಯ ರೋಗಗಳು ಹುಟ್ಟಿಕೊಳ್ಳುತ್ತಿವೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಪರಿಸರದ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಒಂದೊಂದು ಗಿಡ ನೆಟ್ಟರು. ಮುಖ್ಯಶಿಕ್ಷಕಿ ಡಾಲಿ, ಶಿಕ್ಷಕರಾದ ಅಣ್ಣಪ್ಪ ನಾಯಕ್, ಸ್ವಾತಿ, ಅಕ್ಷತಾ, ಜಯಪಾಲ್, ನಿರಂಜನ್, ಮುಖಂಡರಾದ ಯು.ಬಿ.ಮಂಜಯ್ಯ, ಬಕ್ಕಿ ರವಿ, ಎಂ.ಎಸ್.ಕೃಷ್ಣ, ಬಿ.ರಾಮು, ಮಗ್ಗಲಮಕ್ಕಿ ಗಣೇಶ್ ಇತರರಿದ್ದರು.