ಜಿಲ್ಲೆ

ತಿಂಗಳಿಂದ ಡಯಾಲಿಸಿಸ್ ಘಟಕ ಬಂದ್!

ರಾಣೆಬೆನ್ನೂರ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕವನ್ನು ಕಳೆದ ಒಂದು ತಿಂಗಳಿಂದ ಬಂದ್ ಮಾಡಲಾಗಿದ್ದು, ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವವರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬೆಡ್​ಗಳನ್ನು ಕಾಯ್ದಿರಿಸಲಾಗಿದೆ. ಕೋವಿಡ್ ವಾರ್ಡ್​ಗಳನ್ನು ದಾಟಿಕೊಂಡು ಡಯಾಲಿಸಿಸ್ ಘಟಕಕ್ಕೆ ಹೋಗಬೇಕು. ಹೀಗಾಗಿ ಸೋಂಕು ಹರಡಬಾರದು ಎಂಬ ಕಾರಣಕ್ಕೆ ವೈದ್ಯರು ಡಯಾಲಿಸಿಸ್ ಘಟಕವನ್ನು ಬಂದ್ ಮಾಡಿದ್ದಾರೆ.

ನಗರ ಸೇರಿ ತಾಲೂಕಿನಲ್ಲಿ 13 ಜನ ರೋಗಿಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಎಲ್ಲರೂ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿಯೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೀಗ ವೈದ್ಯರು ಘಟಕವನ್ನು ಬಂದ್ ಮಾಡಿದ್ದು, ರೋಗಿಗಳಿಗೆ ಹಿರೇಕೆರೂರ ಅಥವಾ ಬ್ಯಾಡಗಿ ತಾಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಹುತೇಕ ರೋಗಿಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ‘ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಹಿರೇಕೆರೂರ ಹಾಗೂ ಬ್ಯಾಡಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಆಯಾ ತಾಲೂಕಿನ ರೋಗಿಗಳು ಬರುತ್ತಾರೆ. ಅಲ್ಲಿನ ವೈದ್ಯರು ನಮ್ಮನ್ನು ಮಾತನಾಡಿಸುತ್ತಿಲ್ಲ. 4 ಗಂಟೆಗಳ ಕಾಲ ಮಾಡಬೇಕಾದ ಡಯಾಲಿಸಿಸ್ ಅನ್ನು 2 ಗಂಟೆಯಲ್ಲಿ ಮುಗಿಸುತ್ತಿದ್ದಾರೆ. ಇದರಿಂದ ಆರೋಗ್ಯದಲ್ಲಿ ಬಹಳಷ್ಟು ಸಮಸ್ಯೆ ಎದುರಾಗುತ್ತಿವೆ. ಅಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಬಸ್​ಗಳು ಸಿಗುತ್ತಿಲ್ಲ. ಹೀಗಾಗಿ, ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ’ ಎಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೂಪಾ ಮಠದ, ಕುಮಾರ ಬಾಳಿಕಾಯಿ ಎಂಬುವರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದಾರೆ.

ಬಲ ಭಾಗದಲ್ಲಿ ಬೇಕು ಬಾಗಿಲು: ಆಸ್ಪತ್ರೆ ಒಳಭಾಗದಿಂದ ಹೋದರೆ ಕೋವಿಡ್ ವಾರ್ಡ್ ಗಳು ಸಿಗುತ್ತದೆ. ಬದಲಾಗಿ ಬಲ ಬದಿಯಿಂದ ತೆರಳಿದರೆ ನೇರವಾಗಿ ಡಯಾಲಿಸಸ್ ಘಟಕ ತಲುಪುತ್ತೇವೆ. ಆದ್ದರಿಂದ ಆಸ್ಪತ್ರೆಯ ಬಲ ಬದಿಯಲ್ಲಿ ಡಯಾಲಿಸಿಸ್ ಘಟಕಕ್ಕೆ ಬಾಗಿಲು ನಿರ್ವಿುಸಿ ದಾರಿ ಮಾಡಿಕೊಡಬೇಕು ಎಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ಒತ್ತಾಯ ಮಾಡಿದ್ದಾರೆ. ಆದರೆ, ತಿಂಗಳು ಕಳೆದರೂ ಸಮಸ್ಯೆಗೆ ಸ್ಪಂದಿಸಿಲ್ಲ.

ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕರೊನಾ ರೋಗಿಗಳಿಗೆ ಮೀಸಲಿಟ್ಟಿರುವುದರಿಂದ ಡಯಾಲಿಸಸ್ ಘಟಕ ಬಂದ್ ಮಾಡಲಾಗಿದೆ. ಹಿರೇಕೆರೂರ, ಬ್ಯಾಡಗಿಯಲ್ಲಿ ಕೋವಿಡ್ ಆಸ್ಪತ್ರೆ ಇಲ್ಲದ ಕಾರಣ ಅಲ್ಲಿ ಡಯಾಲಿಸಸ್ ಮಾಡಿಸಲಾಗುತ್ತಿದೆ. ಆದ್ದರಿಂದ ಇಲ್ಲಿಯ ರೋಗಿಗಳನ್ನು ಅಲ್ಲಿಗೆ ತೆರಳಲು ಸೂಚಿಸಿದ್ದೇವೆ. ಅಲ್ಲದೆ, ನಮ್ಮ ಆಸ್ಪತ್ರೆಯಲ್ಲಿರುವ ಡಯಾಲಿಸಸ್ ಘಟಕವನ್ನು ಏಜೆನ್ಸಿಯವರು ಬೇರೆಡೆ ಶಿಫ್ಟ್ ಮಾಡುವವರಿದ್ದಾರೆ. ಹೀಗಾಗಿ, ಕರೊನಾ ಮುಗಿಯುವವರೆಗೂ ಡಯಾಲಿಸಸ್ ಸೌಲಭ್ಯ ದೊರೆಯುವುದು ಡೌಟು. | ಡಾ. ಪರಮೇಶ್ವರಪ್ಪ ಆರ್.ಪಿ., ಆಸ್ಪತ್ರೆಯ ಆಡಳಿತಾಧಿಕಾರಿ ಒಂದು ತಿಂಗಳ ಅವಧಿಯಲ್ಲಿ ಹಲಗೇರಿ ಹಾಗೂ ತಾಂಡಾದ ತಲಾ ಒಬ್ಬ ವ್ಯಕ್ತಿಗಳು ಡಯಾಲಿಸಿಸ್ ಇಲ್ಲದ ಕಾರಣ ಮೃತಪಟ್ಟಿದ್ದಾರೆ. ತಾಲೂಕು ಆಸ್ಪತ್ರೆಯ ಇನ್ನೊಂದು ಬದಿಯಲ್ಲಿ ಪ್ರವೇಶಕ್ಕೆ ಅವಕಾಶವಿದ್ದರೂ ವೈದ್ಯರು ಅದರತ್ತ ಗಮನ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಕೂಡಲೆ ಸೂಕ್ತ ಕ್ರಮ ಕೈಗೊಂಡು ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು. | ನಾಗರಾಜ ಬದಾಮಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿ