ಯಳಂದೂರು: ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ತಿಂಗಳ ಪ್ರತಿ ಶನಿವಾರದಂದು ಯಳಂದೂರು, ಕೊಳ್ಳೇಗಾಲ, ಸಂತೆಮರಹಳ್ಳಿ ಗ್ರಾಮಗಳಲ್ಲಿರುವ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಲಾಗುವುದು. ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಮೊದಲ ಮಹಡಿಯಲ್ಲಿ ನೂತನ ಶಾಸಕರ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ನನ್ನ ಕ್ಷೇತ್ರ ಮೂರು ತಾಲೂಕುಗಳಿಗೆ ಹಂಚಿ ಹೋಗಿದೆ. ಕ್ಷೇತ್ರದ ಮತದಾರರ ಅನುಕೂಲಕ್ಕಾಗಿ ನಾನು ಮೂರು ಕಡೆ ಕಚೇರಿಗಳನ್ನು ತೆರೆದಿದ್ದೇನೆ. ಪ್ರತಿ ತಿಂಗಳ ಮೊದಲ ಶನಿವಾರ ಕೊಳ್ಳೇಗಾಲ, ಎರಡನೇ ಶನಿವಾರ ಯಳಂದೂರು ಹಾಗೂ ಮೂರನೇ ಶನಿವಾರ ಸಂತೆಮರಹಳ್ಳಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ನಾಲ್ಕನೇ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಇದ್ದುಕೊಂಡು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅದನ್ನು ನೀಗಿಸಲು ಕ್ರಮ ವಹಿಸಲಾಗುವುದು. ಕ್ಷೇತ್ರದ ಮೂರು ಕಡೆ ಕಚೇರಿಯನ್ನು ತೆರೆದಿರುವುದರಿಂದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಕಚೇರಿಗೆ ನೀಡಬಹುದು. ಇದರಿಂದ ದೂರದೂರಿಗೆ ಅಲೆಯುವುದು ತಪ್ಪಲಿದೆ. ಈ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಜಯಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ವಡಗೆರೆ ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ತೋಟೇಶ್, ಪಪಂ ಸದಸ್ಯರಾದ ಮಹೇಶ್ ವೈ.ಜಿ., ರಂಗನಾಥ, ತಾಪಂ ಮಾಜಿ ಅಧ್ಯಕ್ಷೆ ಗಂಗಾಮಣಿ, ರೇವಣ್ಣ, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.