ಜಿಲ್ಲೆ

ತಾಸಿಗೆ 10 ಜನರಿಗಷ್ಟೇ ಪಡಿತರ

ಹುಬ್ಬಳ್ಳಿ: ಕರೊನಾ ಸೋಂಕು ಹರಡುವಿಕೆ ತಡೆಯಲು ಪರಸ್ಪರರ ಮಧ್ಯೆ ಸಾಕಷ್ಟು ಅಂತರ ಕಾಪಾಡಿಕೊಳ್ಳುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿ ತಾಸಿಗೆ 10 ಜನರಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಪಡಿತರದಾರರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಒಂದೇ ಸಲಕ್ಕೆ 2 ತಿಂಗಳ ಪಡಿತರ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭಾನುವಾರದಿಂದಲೇ ಎಲ್ಲೆಡೆ ಪಡಿತರ ಧಾನ್ಯ ವಿತರಣೆ ಕಾರ್ಯ ಪ್ರಾರಂಭವಾಗಿದೆ.

ಮುಂಜಾಗ್ರತೆಯಾಗಿ ನ್ಯಾಯ ಬೆಲೆ ಅಂಗಡಿಗಳ ಎದುರು 1 ಮೀಟರ್ ಅಂತರದಲ್ಲಿ ಪಡಿತರದಾರರು ನಿಲ್ಲಲು ಬಿಳಿ ಬಣ್ಣ ಅಥವಾ ಸುಣ್ಣದಿಂದ ಗುರುತು ಸಹ ಮಾಡಲಾಗಿದೆ. ಆದರೂ ಕೆಲವೆಡೆ ಪಡಿತರ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕದಿಂದ ಸೋಮವಾರ ಬೆಳಗ್ಗೆ ಜನರು ಗುಂಪು ಗೂಡಿದ್ದರು. ಜನರು ಸೇರುವುದನ್ನು ತಡೆಯಲು ಕೆಲವೆಡೆ ಪೊಲೀಸರನ್ನು ಸಹ ನಿಯೋಜಿಸಲಾಗಿದೆ.

ಪ್ರತಿ ತಾಸಿಗೆ 10ರಂತೆ ದಿನಕ್ಕೆ 100 ಜನರಿಗೆ ಮಾತ್ರ ಪಡಿತರ ವಿತರಿಸುವ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಪಡಿತರ ವಿತರಣೆಯ ಹಿಂದಿನ ದಿನ ಅಥವಾ ಅಂದು ಬೆಳಗ್ಗೆ 100 ಜನರಿಗೆ ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ಸಮಯ ನಿಗದಿಗೊಳಿಸಿ ಕೂಪನ್ ವಿತರಿಸಲಾಗುವುದು.

ನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಪಡಿತರ ಧಾನ್ಯ ವಿತರಿಸಲಾಗುವುದು. ಪಡಿತರ ಚೀಟಿದಾರರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿ ಎದುರು ಸರದಿಯಲ್ಲಿ ನಿಲ್ಲುವಂತೆ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಕರೊನಾ ಸೋಂಕು ಹರಡದಂತೆ ತಡೆಯಲು ಹೆಬ್ಬೆಟ್ಟು ಗುರುತು ಪಡೆಯುವ ಬದಲು ಪಡಿತರ ಚೀಟಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಸಂಖ್ಯೆ ಆಧರಿಸಿ ಸಾಮಗ್ರಿ ನೀಡಲಾಗುತ್ತದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ 70 ಕೆಜಿ ಉಚಿತ ಅಕ್ಕಿ ವಿತರಿಸಲಾಗುತ್ತದೆ.

ಆದ್ಯತಾ (ಬಿಪಿಎಲ್) ಕಾರ್ಡ್​ದಾರರಿಗೆ ಪ್ರತಿ ಯುನಿಟ್​ಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್​ಗೆ 4 ಕೆಜಿ ಗೋಧಿ ಉಚಿತವಾಗಿ ನೀಡಲಾಗುತ್ತದೆ.

ಆದ್ಯತಾ (ಬಿಪಿಎಲ್) 1 ಯುನಿಟ್ ಪಡಿತರ ಚೀಟಿಗೆ 15 ರೂ. ಕೆಜಿಯಂತೆ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ.

ಆದ್ಯತೇತರ (ಎಪಿಎಲ್) ಕಾರ್ಡ್​ದಾರರಿಗೆ 1ಕ್ಕಿಂತ ಹೆಚ್ಚಿನ ಯುನಿಟ್​ನ ಪಡಿತರ ಚೀಟಿಗೆ 15 ರೂ. ಕೆಜಿಯಂತೆ 20 ಕೆಜಿ ಅಕ್ಕಿ ವಿತರಿಸಲಾಗುತ್ತದೆ.

ಅಕ್ಕಿ, ಗೋಧಿಯ ಸಂಗ್ರಹ ಸಾಕಷ್ಟು ಇದೆ. ಪಡಿತರ ಪಡೆಯಲು ಬರುವ ಚೀಟಿದಾರರು ಇನ್ನೊಬ್ಬರಿಂದ ಸಾಕಷ್ಟು ಅಂತರದಲ್ಲಿ ನಿಂತುಕೊಳ್ಳಬೇಕು. ಪ್ರತಿ ಚೀಟಿದಾರ ಕುಟುಂಬಕ್ಕೂ ಪಡಿತರ ಸಿಗಲಿದೆ. ಯಾವುದೇ ರೀತಿಯ ಗೊಂದಲ ಬೇಡ.| ಸದಾಶಿವ ಮರ್ಜಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಧಾರವಾಡ

EndFragment