ಜಿಲ್ಲೆ

ತಾಳುಬೆಟ್ಟದ ಚೆಕ್‌ಪೋಸ್ಟ್‌ಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತಾಳುಬೆಟ್ಟದ ಚೆಕ್‌ಪೋಸ್ಟ್‌ಗೆ ಗುರುವಾರ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮ.ಬೆಟ್ಟಕ್ಕೆ ಭೇಟಿ ನೀಡಿದ ಶಾಸಕರು ರಸ್ತೆ ಬದಿ ಕೈಗೊಂಡಿರುವ ಕೆಲ ಕಾಮಗಾರಿ ಹಾಗೂ ಪಿಡಬ್ಲ್ಯುಡಿ ಇಲಾಖೆಯ ವಸತಿ ಗೃಹದ ಬಳಿ ಕೈಗೊಂಡಿರುವ ಕಟ್ಟಡ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.

ಕುಡಿಯುವ ನೀರಿನ ಸ್ಥಳ, ವಾಹನಗಳ ಪಾರ್ಕಿಂಗ್, ಹಸಿರು ವನ, ದೇಗುಲ ಮುಂಭಾಗದ ರಂಗಮಂದಿರ ಹಾಗೂ ಇನ್ನಿತರ ಕಡೆಗಳಿಗೆ ತೆರಳಿದ ಶಾಸಕರು ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಮಾಸ್ಟರ್ ಪ್ಲಾೃನ್ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಾಸ್ತವ್ಯ ಹೂಡುವುದರಿಂದ ರಂಗಮಂದಿರದಲ್ಲಿ ಯಾವುದೇ ಕಾರಣಕ್ಕೂ ಅಶುಚಿತ್ವ ನಿರ್ಮಾಣವಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಪ್ಲಾಸ್ಟಿಕ್ ವಸ್ತುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಳುಬೆಟ್ಟದಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಶಾಸಕರು ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸಲಹೆ, ಸೂಚನೆಯನ್ನು ನೀಡಿದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ಪಿಡಿಒ ಕಿರಣ್, ಗ್ರಾಪಂ ಸದಸ್ಯರಾದ ಡಿ.ಕೆ.ರಾಜು, ಚಿನ್ನವೆಂಕಟ, ಮುಖಂಡರಾದ ಮಂಜೇಶ್, ಮಾದೇಶ್, ಸುರೇಶ್, ಗೋಪಾಲ್‌ನಾಯ್ಕ, ದೊಡ್ಡಸೀಗನಾಯ್ಕ, ಜಸ್ಸೀಂಪಾಷ, ಭಷರತ್, ವಿಜಯಕುಮಾರ್, ಗೋವಿಂದ, ಶಿವು, ಪುಟ್ಟಣ್ಣ, ವೆಂಕಟೇಶ್ ಹಾಗೂ ಇನ್ನಿತರರು ಇದ್ದರು.