ತಾಳಿಕೋಟೆ: ಪಟ್ಟಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಜೊತೆಗೆ ಜನರಿಗೆ ಸರ್ಕಾರದ ಯೋಜನೆಗಳು ಮುಟ್ಟುವಂತಾಗಲು ಶ್ರಮಿಸಲಾಗುವುದು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ)ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸದಸ್ಯರು, ಅಧಿಕಾರಿಗಳ ಸಭೆ, ಪ್ರಗತಿ ಪರಿಶೀಲನೆ ನಡೆಸಿದ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಜನರಿಗೆ ಕುಡಿಯುವ ನೀರು, ಸ್ವಚ್ಚತೆಗೆ ಗಮನ ಹರಿಸಲು ಆದ್ಯತೆ ನೀಡಲಾಗುವುದು. ಕೆಲವು ಮುಖ್ಯ ರಸ್ತೆಗಳು, ಪುಟಪಾತ್‌ಗಳನ್ನು ಕೆಲವರು ಅತಿಕ್ರಮಿಸಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿರುವ ದೂರುಗಳು ಬಂದಿವೆ. ಕೆಲವು ಬಡಾವಣೆಗಳಲ್ಲಿ ಇಕ್ಕೆಲ ರಸ್ತೆಗಳಲ್ಲಿ ಮನೆಯ ಮುಂದೆ ಬೃಹತ್ ಕಟ್ಟೆಗಳು, ಇನ್ನಿತರ ಕಟ್ಟಡ ಕಟ್ಟಿಕೊಂಡು ಸಾರ್ವಜನಿಕರ ಸಂಚಾರ ತೊಂದರೆ ಮಾಡಿರುವುದನ್ನು ಸಂಪೂರ್ಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಮಾಳನೂರ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಎಸ್‌ಎ್ಸಿ ಅನುದಾನ ಕೇಳಿದ್ದೇನೆ. ಪಟ್ಟಣದಲ್ಲಿನ ಉದ್ಯಾನಗಳ ಜಾಗ ಅತಿಕ್ರಮಣವಾದ ದೂರುಗಳು ಬಂದಿದ್ದು, ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಕೆಲವು ಉದ್ಯಾನಗಳ ಜಾಗವನ್ನು ಕೈಬರಹದ ಉತ್ತಾರದ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಇದೆ. ಅಂತವುಗಳನ್ನು ಮರಳಿ ಪುರಸಭೆಯ ವಶಕ್ಕೆ ಪಡೆಯಲಾಗುವುದು. ಸರ್ಕಾರದ ಆಸ್ತಿಗೆ ಕೈಹಾಕಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಯೋಜನಾ ನಿರ್ದೇಶಕ ಪಿ.ಎ.ಸೌದಾಗರ, ಮುಖ್ಯಾಧಿಕಾರಿ ಮೋಹನ್ ಜಾಧವ, ಅಣ್ಣಾಜಿ ಜಗತಾಪ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಮುಸ್ತಾ ಚೌದ್ರಿ, ಡಿ.ವಿ.ಪಾಟೀಲ, ಮುದಕಣ್ಣ ಬಡಿಗೇರ, ನಿಂಗರಾಜ ಕುಂಟೋಜಿ, ಯಾಸೀನ ಮಮದಾಪೂರ, ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ, ಆರೋಗ್ಯ ಅಧಿಕಾರಿ ಶಿವಾನಂದ ಜುಮನಾಳ, ಶ್ರೀಪಾದ ಜೋಶಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಎಇಇ ಸಂದೀಪ ವಠಾರ, ಡಿ.ಬಿ.ಜಾನ್ವೇಕರ, ಪಿಎಸ್‌ಐ ರಾಮನಗೌಡ ಸಂಕನಾಳ ಹಾಗೂ ಪಿಡಬ್ಲುೃಡಿ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಪೂರ್ಣ ಕೆಲಸ ಮಾಡಿಲ್ಲ. ಕೆಲವು ಕೆಲಸಗಳು ಬಾಕಿ ಉಳಿದಿದ್ದು, 3.17 ಕೋಟಿ ರೂ. ಸಂಪೂರ್ಣ ಬಿಲ್ ತೆಗೆಸಿಕೊಂಡಿದ್ದಾರೆ. ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಸಮಗ್ರ ವರದಿಯೊಂದಿಗೆ ಲೋಕಾಯುಕ್ತರಿಗೆ ನಾನೇ ದೂರು ಸಲ್ಲಿಸುತ್ತೇನೆ. ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕರು