oppo_2 
ಜಿಲ್ಲೆ

ತಾಳಿ ಮಾರಿವ್ರಿ, ದಾರು ಬಂದ್​ ಮಾಡಿಸಿ

ಕಲಬುರಗಿ: ಗಂಡು ಮಕ್ಕಳೆಲ್ಲ ಶರೀ ಕುಡಿದು ಹೆಂಡತಿಯರ ತಾಳಿ ಮರ‍್ಯಾರ‍್ರಿ, ರೇಷನ್​ ಅಕ್ಕಿ ಮರ‍್ತಾರೆ. ಹೆಣ್ಮಕ್ಕಳು ಮನೆಯಲ್ಲಿ ಹೊಟ್ಟೆಗೆ ಏನು ತಿನ್ನಬೇಕು. ಕೇಳಿದ್ರೆ ಒಲೆಯಲ್ಲಿ ನೀರು ಹಾಕಿ ಉಪವಾಸ ಸಾಯಿರಿ ಅಂತಾರೆ. ಆಪೀಸರ್​ಗಳಿಗೆ ಕೇಳಲು ಹೋದರೆ ಕೇಸ್​ ಹಾಕ್ಯಾರ. ನಾವು ಯಾರಿಗೆ ಕೇಳಬೇಕ್ರಿ ಎಂದು ಯಡ್ರಾಮಿ ತಾಲೂಕಿನ ಕೋಣಶಿರಸಗಿಯ ಮಹಾಂತಮ್ಮ ಬಿರಾದಾರ, ಭಾಗಮ್ಮ ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡರು.

ದುಡಿದು ತಿನ್ನುತ್ತಿದ್ದೇವೆ. ಕಿರಾಣಿ ಅಂಗಡಿಯಲ್ಲೂ ಮಾರುತ್ತಿದ್ದಾರೆ. ಹೇಳುವವರು ಕೇಳುವವರು ಇಲ್ಲ. ಶರೀ ಮಾರಾದ್ರಿಂದ ರೋಗ ಬಂದು ದವಾಖಾನಿಯವರಿಗೆ, ಸರಾಯಿ ಮಾರುವವರಿಗೆ ಲಾಭ ಇದೆ. ಬಂದ್​ ಮಾಡಿ ಅಂತಾ ಪ್ರತಿಭಟನೆ ನಡೆಸಿದರೆ ನಮ್ಮ ಮೇಲ್​ ಕೇಸ್​ ಹಾಕಿ, ನಿತ್ಯ ಟರ‍್ಚ್​ರ್​ ಕೊಡ್ತಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸಾಮಾಜಿಕ ಹೋರಾಟಗಾರ ರವಿಚಂದ್ರ ಗುತ್ತೇದಾರ ಮಾತನಾಡಿ, ಜೇರ‍್ಗಿ, ಯಡ್ರಾಮಿ ತಾಲೂಕಿನ ಪಟ್ಟಣ, ಹಳ್ಳಿಗಳಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇತ್ತೀಚೆಗೆ ಪ್ರತಿಭಟನೆ ನಡೆಸಿದ ಹೋರಾಟಗಾರರು, ಮಹಿಳೆಯರ ಮೇಲೆ ಕೇಸ್​ ಹಾಕಿ, ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮ ಮದ್ಯ ಮಾರಾಟಗಾರರ ಜತೆ ಕೈ ಜೋಡಿಸಿ, ಜನಸಾಮಾನ್ಯರ ಮೇಲೆ ದರ‍್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು.

ಹಲವು ಬಾರಿ ಲಿಖಿತ ಮನವಿ ಮಾಡಿದರೂ ಸ್ಪಂದಿಸದಕ್ಕೆ ಅಬಕಾರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗಿತ್ತು. ಮಹಿಳೆಯರು ಇಲಾಖೆ ಅಧಿಕಾರಿಗಳ ಕಾಲಿಗೆ ಬಿದ್ದು, ಕಣ್ಣೀರು ಸುರಿಸಿ ಅಂಗಲಾಚಿ ಬೇಡಿಕೊಂಡರು. ಆದರೆ ಮುತ್ತಿಗೆ ಹಾಕಿದ ನೆಪದಲ್ಲಿ ಹೋರಾಟಗಾರರಾದ ಶಿವಲಿಂಗ ಹಳ್ಳಿ, ಸುಧೀಂದ್ರ ಇಜೇರಿ, ಭಗವಂತರಾಯ, ಆಶಾ ಕರ‍್ಯರ‍್ತೆ ಸುಮಂಗಲಾ ಭಂಕೂರ ಹಾಗೂ ಇತರ ೨೦ ಜನರ ಮೇಲೆ ನಾನ್​ ಬೇಲೆಬಲ್​ ಕೇಸ್​ ದಾಖಲಿಸಿ, ದರ‍್ಜನ್ಯ ಎಸಗಿದ್ದಾರೆ ಎಂದು ಹೇಳಿದರು.

ಬಸವರಾಜ ಬಾಗೇವಾಡಿ, ನಿಂಗು ದೊಡ್ಡಮನಿ, ಶಂಕರ ದೋರನಳ್ಳಿ, ಸತೀಶ ಜಾಗೀರದಾರ, ವಿಶ್ವನಾಥ ಪಾಟೀಲ್​, ಮಹೇಶ ಪಾಟೀಲ್​, ಗಿರೀಶ ತುಂಬಗಿ ಇತರರಿದ್ದರು.