ಜಿಲ್ಲೆ

ತಾಳಿ, ಕಾಲುಂಗರವಿಟ್ಟು ಪರೀಕ್ಷೆಗೆ ಅನುಮತಿ

ಜಯತೀರ್ಥ ಪಾಟೀಲ

ಕಲಬುರಗಿ: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಲೆಕ್ಕ ಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ರಿಯಾಯಿತಿ ಇದ್ದರೂ ತಾಳಿ ತೆಗೆಸಿ ಕೇಂದ್ರಕ್ಕೆ ಪ್ರವೇಶ ನೀಡಿದ್ದ ಘಟನೆ ಶನಿವಾರ ನಡೆದಿದ್ದು, ಈ ಕುರಿತು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರಕ್ಕೆ ಅನುಮತಿ ನೀಡಿ, ಪ್ರವೇಶಕ್ಕೆ ಅನುಮತಿ ನೀಡಲಾಯಿತು.

ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೆ ಬ್ಲೂಟೂತ್ ಬಳಸಿ ಅಕ್ರಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಪೊಲೀಸರು ಅಭ್ಯರ್ಥಿಗಳನ್ನು ತೀವ್ರ ತರದಲ್ಲಿ ತಪಾಸಣೆ ನಡೆಸಿದರು.

ಈ ವೇಳೆ ನಗರದ ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿಗಳ ತಾಳಿ ತೆಗೆಸಿ, ಪ್ರವೇಶ ನೀಡಿದ್ದು, ವಾಗ್ವಾದಕ್ಕೆ ಕಾರಣವಾದರೆ ಮತ್ತೊಂದೆಡೆ ಮಹಿಳಾ ಅಭ್ಯರ್ಥಿಗಳು ಬೇಸರದಿಂದಲೇ ತಾಳಿ ತೆಗೆದಿಟ್ಟು ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಈ ಕುರಿತು ಶನಿವಾರ ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತು, ಭಾನುವಾರ ತಾಳಿ, ಕಾಲುಂಗರಕ್ಕೆ ಅನುಮತಿ ನೀಡಿದರು.

ನಗರದ ಎಲ್ಲೆಡೆ ಕಟ್ಟುನಿಟ್ಟಿನ ತಪಾಸಣೆ ವೇಳೆ ಅಭ್ಯರ್ಥಿಗಳಲ್ಲಿನ ಕಿವಿ ಓಲೆ, ಮೂಗುತ್ತಿ, ಕೊರಳಲ್ಲಿನ ಲಾಕೆಟ್, ತಾಯಿತ್, ಉಡದಾರ, ಲಿಂಗದಾರ ಸೇರಿ ಎಲ್ಲವನ್ನು ಕಳಚಿದ ನಂತರವೇ ಒಳಗೆ ಬಿಟ್ಟರು. ಆದರೆ ಮಹಿಳಾ ಅಭ್ಯರ್ಥಿಗಳ ಕೊರಳಲ್ಲಿನ ತಾಳಿ, ಕಾಲುಂಗರಕ್ಕೆ ಅನುಮತಿ ಇದ್ದರೂ ನಿರಾಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಹೊರಗಡೆ ನಿಂತ ತಮ್ಮ ಸಂಬAಧಿಕರ ಕೈಗೆ ಕೊಟ್ಟು ಒಳ ಹೋದರು.

ಕಟ್ಟುನಿಟ್ಟಿನ ತಪಾಸಣೆ: ಅಕ್ರಮಗಳನ್ನು ತಡೆಗಟ್ಟಲು ಅಭ್ಯರ್ಥಿಗಳ ಕಿವಿಯಲ್ಲಿ ಟಾರ್ಚ್ ಹಾಕಿ ತಪಾಸಣೆ ನಡೆಸಿದಲ್ಲದೆ. ಅಭ್ಯರ್ಥಿಗಳ ಬಯೋ ಮೆಟ್ರಿಕ್ ಫೇಸ್ ಐಡೇಂಟಿಫಿಕೇಷನ್ ಮಾಡಲಾಯಿತು. ಎಲ್ಲ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಿದ್ದು, ಪರೀಕ್ಷಾ ಸಂವೀಕ್ಷರಿಗೆ ಬಾಡಿ ಕ್ಯಾಮೆರಾ ಅಳವಡಿಸಿ, ಕಣ್ಗಾವಲು ಇಡಲಾಗಿತ್ತು.