ಹಾಸನ: ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವ ಕೊನೇ ಕ್ಷಣದಲ್ಲಿ ವಧು ನನಗೆ ಮದುವೆ ಬೇಡ ಎಂದು ಹೇಳಿ ಮಂಟಪದಿಂದ ಹೊರನಡೆದಳು. ಇದರಿಂದ ಮದುವೆ ಕಾರ್ಯ ಸ್ಥಗಿತಗೊಂಡಿತು.
ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮದುವೆ ನಿರಾಕರಿಸಿದ ಯುವತಿ. ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ಜಿ.ವೇಣುಗೋಪಾಲ್ ಮದುವೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಮುಹೂರ್ತದ ವೇಳೆ ಪಲ್ಲವಿಗೆ ಬಂದ ಒಂದು ಕರೆಯ ನಂತರ ಮನಸ್ಸು ಬದಲಾಯಿಸಿ, ಇನ್ನೇನು ತಾಳಿ ಕಟ್ಟಬೇಕು ಎನ್ನುವಾದ ‘ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಈ ಮದುವೆ ಬೇಡ’ ಎಂದು ಹಠ ಹಿಡಿದಳು.
ಈ ವೇಳೆ ವರ ವೇಣುಗೋಪಾಲ್ ಹಾಗೂ ವಧುವಿನ ಪಾಲಕರು ಕೊನೆಯ ಕ್ಷಣದವರೆಗೂ ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ವಧು ಒಪ್ಪದ ಕಾರಣ ಮದುವೆ ಕೊನೆಯ ಕ್ಷಣದಲ್ಲಿ ನಿಂತು ಹೋಯಿತು.
ವಧು ಪಲ್ಲವಿಯ ಆಕೆಯ ಪಾಲಕರು ಮಗಳ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಕೆ ಮದುವೆ ಬೇಡವೇ ಬೇಡ ಎಂದು ದೃಢವಾಗಿ ಹೇಳಿದಳು. ಇದರಿಂದ ವರ ವೇಣುಗೋಪಾಲ್ ‘ಬಲವಂತದ ಮದುವೆ ಬೇಡ’ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದರು.
ಈ ಘಟನೆಯಿಂದ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ವಧು-ವರನ ಕಡೆಯ ಕುಟುಂಬದವರು, ಬಂಧು ಮಿತ್ತರು ಆಘಾತಕ್ಕೆ ಒಳಗಾದರು. ವಿಷಯ ತಿಳಿದ ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಆಗಮಿಸಿ ಹುಡುಗಿಗೆ ಮನವರಿಕೆ ಮಾಡಲು ಮುಂದಾದರು. ಆದರೆ, ಪಲ್ಲವಿಯ ನಿರ್ಧಾರ ಬದಲಾಗದ ಕಾರಣ ಮದುವೆ ನಿಂತುಹೋಯಿತು. ಇದರಿಂದ ಮನನೊಂದ ವಧು-ವರರ ಪಾಲಕರು, ಸಂಬಂಧಿಗಳು ಕಣ್ಣೀರಿಡುತ್ತ ಮದುವೆ ಮಂಟಪದಿಂದ ಹೊರನಡೆದರು.
ಪಲ್ಲವಿ ಹಾಗೂ ಶಾಲಾ ಶಿಕ್ಷಕ ಜಿ. ವೇಣುಗೋಪಾಲ್ ಇಬ್ಬರ ಒಪ್ಪಿಗೆಯಂತೆ ಮೂರೂವರೆ ತಿಂಗಳ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಇಬ್ಬರ ಪ್ರಿವೆಡ್ಡಿಂಗ್ ಶೂಟ್ ಕೂಡ ನಡೆದಿತ್ತು. ಶುಕ್ರವಾರ ಬೆಳಗ್ಗೆ ಮದುವೆಯ ಎಲ್ಲ ಮದುವೆ ಶಾಸ್ತ್ರ ಮುಗಿದು ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಮಯದಲ್ಲಿ ವಧು, ಮದುವೆಯಾಗಲು ನಿರಾಕರಿಸಿದಳು. ಈ ವೇಳೆ ವರ ಬೇಸರದಲ್ಲಿ ಕಣ್ಣೀರು ಹಾಕಿದರು.