ಜಿಲ್ಲೆ

ತಾಲೂಕುವಾರು ಸಭೆ ನಡೆಸಿ : ಡಿಸಿ ಸುಂದರೇಶ ಬಾಬು ಸೂಚನೆ

ಕೊಪ್ಪಳ:ಕುಡಿವ ನೀರು ಹಾಗೂ ಮಳೆ ಹಾನಿ ಸಂಬಂಧ ಕಾಲ ಕಾಲಕ್ಕೆ ತಾಲೂಕುವಾರು ಸಭೆಗಳನ್ನು ನಡೆಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಜಿಲ್ಲಾಡಳಿತ ಭನವದ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.


ಮಳೆ ಕೊರತೆ ಅಥವಾ ಇನ್ನಾವುದೇ ಕಾರಣದಿಂದ ಕುಡಿವ ನೀರು ಸಮಸ್ಯೆಯಾಗಿದ್ದಲ್ಲಿ ತಕ್ಷಣ ಸ್ಪಂದಿಸಿ. ಮಳೆಯಿಂದ ಬೆಳೆ, ಮಾನವ, ಜಾನುವಾರು, ಆಸ್ತಿ ಹಾನಿಯಾಗಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿ. ನಿಯಮನುಸಾರ ಪರಿಹಾರ ಕ್ರಮ ಕೈಗೊಳ್ಳಿ. ಎಲ್ಲ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡಸಿ ಜನರ ಅಹವಾಲುಗಳಿಗೆ ಸ್ಪಂದಿಸಿ. ಬೆಳೆಗಳಿಗೆ ರೋಗ ಬಂದಲ್ಲಿ ಪರಿಹಾರ ಉಪಾಯ, ಔಷಧೋಪಚಾರ ಮಾಹಿತಿ ನೀಡಿ. ಮಳೆಗಾಲ ಹಿನ್ನೆಲೆಯಲ್ಲಿ ಕುಡಿವ ನೀರಿಗೆ ಕಲುಷಿತ ನೀರು ಬೆರೆಯದಂತೆ ನೋಡಿಕೊಳ್ಳಿ. ಮಲೇರಿಯಾ, ಡೆಂೆ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ, ಬೇಕಾದ ಎಚ್ಚರಿಕೆ ವಹಿಸಲು ಜಾಗೃತಿ ಮೂಡಿಸಿ. ಕುಡಿವ ನೀರನ್ನು ಕಾಲ ಕಾಲಕ್ಕೆ ಪರೀಕ್ಷೆ ನಡೆಸಿ ವರದಿ ಪಡೆದು ಪೂರೈಸುವಂತೆ ನಿರ್ದೇಶನ ನೀಡಿದರು.


ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಪಿಡಿಒಗಳು ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿ. ಗ್ರಾಮದಲ್ಲಿ ಶುಚಿತ್ವ, ಶುದ್ಧ ಕುಡಿವ ನೀರು ಪೂರೈಕೆ, ಬೀದಿ ದೀಪ, ಚರಂಡಿ ಸ್ವಚ್ಛತೆ, ಜೆಜೆಎಂ ಕಾಮಗಾರಿ ಅನುಷ್ಠಾನ ಮಾಡಿ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ. ತಾಪಂ ಇಒಗಳು ಈ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.


ಎಡಿಸಿ ಸಾವಿತ್ರಿ ಕಡಿ ಮಾತನಾಡಿ, ಈವರೆಗೆ ಜಿಲ್ಲೆಯಲ್ಲಿ ಸಿಡಿಲಿನಿಂದ ಐವರು, ಮನೆ ಕುಸಿದು ಇಬ್ಬರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 246 ಮನೆ ಹಾನಿಯಾಗಿದ್ದು, 195 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. 41 ಜಾನುವಾರು ಮೃತಪಟ್ಟಿದ್ದು, ನಿಯಮನುಸಾರ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, 3.08ಲಕ್ಷ ಹೆಕ್ಟರ್ ಪ್ರದೇಶ ಪೈಕಿ ಈವರೆಗೆ 2.36ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. ಆ.4ವರೆಗೆ 21,695 ಟನ್ ಯೂರಿಯಾ, 15,042 ಟನ್ ಡಿಎಪಿ, 1839 ಟನ್ ಎಂಓಪಿ, 31,253 ಟನ್ ಎನ್‌ಕೆಪಿಎಸ್ ಮತ್ತು 458 ಟನ್ ಎಸ್‌ಎಸ್‌ಪಿ ಒಟ್ಟು 70,288ಟನ್ ರಸಗೊಬ್ಬರ ದಾಸ್ತಾನಿದೆ. 2032.03 ಕ್ವಿಂಟಾಲ್ ಬಿತ್ತನೆ ಬೀಜ ಸಂಗ್ರಹವಿದೆ. ಜುಲೈನಲ್ಲಿ ವಾಡಿಕೆ ಮಳೆ 66 ಮಿ.ಮೀ. ಪೈಕಿ 109 ಮಿ.ಮೀ. ಮಳೆಯಾಗಿದೆ ಎಂದರು.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಇತರ ಇಲಾಖೆ ಅಧಿಕಾರಿಗಳಿದ್ದರು.