ಬೇಲೂರು: ಕ್ರೀಡಾಪಟುಗಳ ಅನುಕೂಲಕ್ಕಾಗಿ ತಾಲೂಕು ಮಟ್ಟದ ಕ್ರೀಡಾಂಗಣ ಇದ್ದರೂ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಚ್.ಪ್ರಕಾಶ್ ಹೇಳಿದರು.
ಬೇಲೂರು ಪಟ್ಟಣ ಸಮೀಪದ ತಾಲೂಕು ಕ್ರೀಡಾಂಗಣದಲ್ಲಿನ ಅವ್ಯವಸ್ತೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ಬುಧವಾರ ಬೆಳಗ್ಗೆ ಮಾತನಾಡಿದ ಅವರು, ಬೇಲೂರು ತಾಲೂಕಿನಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ಅಂದಿನಿಂದ ಇಲ್ಲಿವರೆಗೂ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಹೆಸರು ತಂದಿರುವುದರಿಂದ ಅವರ ಅನುಕೂಲಕ್ಕಾಗಿ ಬೇಲೂರು ಪಟ್ಟಣ ಸಮೀಪ ತಾಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಿದ್ದು, ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ಅದರಲ್ಲೆ ಕೆಲವರು ಮತ್ತು ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ಸೌಲಭ್ಯವಿಲ್ಲ. ಆದರೂ ಈ ಕ್ರೀಡಾಂಗಣ ರಾತ್ರಿ ಸಮಯ ಸಾಕಷ್ಟು ಮದ್ಯ ವ್ಯಸನಿಗಳ ಕಾಟ ಹಾಗೂ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿದೆ. ಆದ್ದರಿಂದ ಸ್ಥಳೀಯ ಆಡಳಿತ ಮತ್ತು ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಇಲ್ಲಿಗೆ ಒಬ್ಬರು ಗೃಹ ರಕ್ಷಕ ಸಿಬ್ಬಂದಿ ನೇಮಿಸಿ ಇಲ್ಲಿನ ವ್ಯವಸ್ಥೆಗೆ ಕಡಿವಾಣ ಹಾಕುವ ಮೂಲಕ ಈ ಕ್ರೀಡಾಂಗಣವನ್ನು ಸಾರ್ವಜನಿಕ ವಲಯಕ್ಕೆ, ಶಿಕ್ಷಣ ಕ್ಷೇತ್ರದ ವಿದ್ಯಾರ್ಥಿಗಳ ಕ್ರೀಡಾ ಬದುಕನ್ನು ರೂಪಿಸಿಕೊಳ್ಳಲು ಕ್ರೀಡಾಂಗಣವನ್ನು ವ್ಯವಸ್ಥಿತವಾಗಿ ನಿರ್ಮಿಸಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಅನುಕೂಲ ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಕ ಹರೀಶ್ ಮಾತನಾಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ದಿನನಿತ್ಯ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಕ್ರೀಡಾಂಗಣ ನಿರ್ಮಿಸಲಾಗಿದೆ. ಆದರೆ ಕಾಲ ಕ್ರಮೇಣ ಅದು ನೆನೆಗುದಿಗೆ ಬಿದ್ದಿತ್ತು. ಈಗಿನ ಶಾಸಕರು ಪುನ: ಕ್ರೀಡಾಪಟುಗಳ ಅನುಕೂಲಕ್ಕಾಗಿ ಕಾಮಗಾರಿಗೆ ಅನುದಾನ ತಂದು ಕೆಲಸ ಪ್ರಾರಂಬಿಸಿದ್ದಾರೆ. ಆದರೆ ಕೆಲ ದಿನಗಳಿಂದ ಕೆಲಸ ಸ್ಥಗಿತವಾಗಿದ್ದರಿಂದ ಕ್ರೀಡಾಂಗಣದಲ್ಲಿ ಹೇಳುವವರು ಕೇಳುವವರು ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿಗೆ ಸಂಜೆ ಸಮಯದಲ್ಲಿ ಬರುವವರು ಮದ್ಯ ಕುಡಿದು ಎಲ್ಲೆಂದರಲ್ಲಿ ಬಟಲಿಗಳನ್ನು ಒಡೆದು ಹಾಕುತ್ತಿರುವುದರಿಂದ ಕ್ರೀಡಾಪಟುಗಳಿಗೆ ಮತ್ತು ವಾಯು ವಿಹಾರಕ್ಕೆ ಬರುವವರಿಗೆ ತೊಂದರೆಯಾಗುತಿದ್ದು, ತಕ್ಷಣವೇ ಇಲ್ಲಿನ ಅವ್ಯವಸ್ಥೆ ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳು ಜನ ಪ್ರತಿನಿಧಿಗಳು ಮುಂದಾಗಬೇಕು ಎಂದರು.
ಈ ಸಂದರ್ಭ ಕೆ.ಎಸ್.ನಾಗರಾಜು, ಪವನ್, ಪ್ರದೀಪ್‌ಗೌಡ, ಜೀವನ್, ಅಮ್ಮಾನ್ ಪಾಷಾ, ಲೋಕೇಶ್‌ಗೌಡ, ಎಂ.ಎನ್.ರಾಜು, ಬಿ.ಎಲ್.ಲಕ್ಷ್ಮಣ್ ಸೇರಿದಂತೆ ಇತರರಿದ್ದರು.