ಹಾಸನ: ತಾಲೂಕು ಕಚೇರಿಯಲ್ಲಿ ನಮಗೆ ಬೇಕಾದ ಯಾವುದಾದರೂ ದಾಖಲೆ ತೆಗೆಸಬೇಕೆಂದರೆ ಕಚೇರಿಗೆ ಅಲೆದೂ ಅಲೆದು ಹೈರಾಣಾಗಬೇಕಾಗುತ್ತದೆ. ಅದರಲ್ಲೂ ಹಳೆಯ ಕಡತಗಳಲ್ಲಿರುವ ದಾಖಲೆ ಅದನ್ನು ಹುಡುಕಲು ತಿಂಗಳಾನುಗಟ್ಟಲೆ ಸಮಯ ಸರಿಯುವುದು ಸುಳ್ಳಲ್ಲ. ಕಡತಗಳನ್ನು ನಿಯಮಿತವಾಗಿ ಜೋಡಿಸದೆ ಎಲ್ಲೆಂದರಲ್ಲಿ ಇಡುವುದರಿಂದ ಹತ್ತಾರು ವರ್ಷಗಳ ಕಡತಗಳು ಒಂದೆಡೆ ಸೇರಿ ನಿಮಗೆ ಬೇಕಾದ ದಾಖಲೆ ಹುಡುಕುವುದು ಸಿಬ್ಬಂದಿಗೆ ತಲೆನೋವಿನ ಕೆಲಸವಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಹಾಸನ ತಾಲೂಕು ತಹಸೀಲ್ದಾರ್ ವಿ. ನಟೇಶ್ ಅವರು ಜನರ ಅಲೆದಾಟ ತಪ್ಪಿಸಿ ಸುಲಭವಾಗಿ ಅಗತ್ಯ ದಾಖಲೆ ಒದಗಿಸಿಕೊಡುವ ನಿಟ್ಟಿನಲ್ಲಿ ಅವಧಿ ಮೀರಿದ ಕಡತಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ಮೂಲಕ ಮಾದರಿ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಕಚೇರಿಯ ಎಲ್ಲಾ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ.
ತಾಲೂಕು ಕಚೇರಿಯಲ್ಲಿ ಎಲ್ಲಾ ಸೇರಿ ಸುಮಾರು 1.25 ಲಕ್ಷ ವಿವಿಧ ದಾಖಲೆಗಳು ಅಡಕವಾಗಿವೆ. ಈ ಪೈಕಿ ಕಳೆದ ಜುಲೈ 7 ರಿಂದ ವಿಲೇವಾರಿ ಮತ್ತು ಅಚ್ಚುಕಟ್ಟಾಗಿ ಜೋಡಣೆ ಕಾರ್ಯ ಆರಂಭಿಸಲಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು 13,200 ಹಳೆಯ ಕಡತಗಳನ್ನು ತಾಲೂಕು ಕಚೇರಿಯಿಂದ ವಿಲೇವಾರಿ ಮಾಡಲಾಗಿದೆ. ಇನ್ನೂ ಸುಮಾರು 26 ಅವಧಿ ಮೀರಿದ ದಾಖಲೆ ಇದ್ದು, ಮುಂದಿನ ಎರಡು-ಮೂರು ತಿಂಗಳಲ್ಲಿ ವಿಂಗಡಿಸಿ ವಿಲೇವಾರಿ ಮಾಡಲಾಗುವುದು ಎಂದು ತಹಸೀಲ್ದಾರ್ ವಿ. ನಟೇಶ್ ತಿಳಿಸಿದರು.
ಹಾಲಿ ಇರುವ ಒಟ್ಟಾರೆ ಕಡತಗಳನ್ನು ಎ, ಬಿ, ಸಿ, ಡಿ ಮತ್ತು ಇ ಎಂದು ವರ್ಗೀಕರಿಸಿ ವಿಂಗಡಿಸಲಾಗಿದೆ. ಇವುಗಳಲ್ಲಿ ಎ- ಶಾತ್ವತ ದಾಖಲೆ, ಬಿ- 30 ವರ್ಷ ಹಳೆಯದು, ಸಿ-10 ವರ್ಷ ಹಳೆಯದು, ಡಿ-5 ವರ್ಷ ಹಳೆಯದು ಮತ್ತು ಇ-ಒಂದು ವರ್ಷದ ದಾಖಲೆಗಳು ಎಂದು ವರ್ಗೀಕರಿಸಲಾಗಿದೆ. ಸದ್ಯ ಸಿ ಮತ್ತು ಡಿ ಗುಂಪಿನ ದಾಖಲೆಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದರು.
ರಜಾ ದಿನವೂ ಕೆಲಸ:
ತಹಸೀಲ್ದಾರ್ ನಟೇಶ್ ಅವರ ಈ ಮಾದರಿ ಕೆಲಸಕ್ಕೆ ಕಚೇರಿಯ ಎಲ್ಲಾ ಸಿಬ್ಬಂದಿ ಕೈಜೋಡಿಸಿದ್ದು, ಗಾಂಧಿ ಜಯಂತಿ ದಿನವೂ ಸೇರಿದಂತೆ ಭಾನುವಾರಗಳಂದೂ ಕಡತ ವಿಲೇವಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಜುಲೈನಿಂದ ಪ್ರತಿದಿನ ನಿತ್ಯದ ಕೆಲಸ ಮುಗಿದ ನಂತರ ಸಂಜೆ 5 ರಿಂದ 7 ರ ವರೆಗೆ ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಕಡತ ವಿಂಗಡಣೆ ಕಾರ್ಯದಲ್ಲಿ ನಿರತರಾಗುತ್ತಿದ್ದಾರೆ. ತಾಲೂಕಿನ ಐದು ಹೋಬಳಿಗಳ ಉಪ ತಹಸೀಲ್ದಾರ್‌ಗಳು, ಗ್ರಾಮ ಸಹಾಯಕರು ಸೇರಿದಂತೆ ಇತರೆ ಸಿಬ್ಬಂದಿಗಳನ್ನೂ ನಿಗದಿತ ದಿನದಂದು ಈ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ನಟೇಶ್ ಅವರು ಈ ಹಿಂದೆ ಬೇಲೂರು ತಹಸೀಲ್ದಾರ್ ಆಗಿದ್ದ ವೇಳೆ ಇದೇ ರೀತಿಯ ಕಾರ್ಯಕ್ಕೆ ಚಾಲನೆ ನೀಡಿದ್ದರು. 2 ವರ್ಷದ ಅವಧಿಯಲ್ಲಿ ಸುಮಾರು 40 ಸಾವಿರ ಅನುಪಯುಕ್ತ ಕಡತಗಳನ್ನು ವಿಲೇವಾರಿ ಮಾಡಿದ್ದರು. ವಿಶೇಷ ಎಂದರೆ ವಿವಿಧ ಪ್ರಕರಣಗಳಲ್ಲಿ ಬೇಕಿದ್ದ ಸುಮಾರು 600 ಕಡತಗಳು ಸಿಕ್ಕಿವೆ. ಈಗಲೂ ಬೇಲೂರಿನಲ್ಲಿರುವ ಸುಮಾರು 80 ಸಾವಿರ ಕಡತಗಳನ್ನು ರೆಕಾರ್ಡ್ ಬುಕ್‌ಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿ ಮಾಡಿದ್ದ ಉಪಯುಕ್ತ ಕೆಲಸವನ್ನು ನಟೇಶ್ ಅವರು ಹಾಸನದಲ್ಲೂ ಮುಂದುವರಿಸಿರುವುದು, ರೈತರ ಮೆಚ್ಚುಗೆಗೆ ಕಾರಣವಾಗಿದೆ.
ಅಚ್ಚುಕಟ್ಟು ವ್ಯವಸ್ಥೆ:
ಹಳೇ ಕಡತ ವಿಲೇವಾರಿ ಮಾಡಿ ಉಳಿದವನ್ನು ರ‌್ಯಾಕ್ ನಂ., ರೋಲ್ ನಂ. ರೀತಿಯಲ್ಲಿ ಇಂಡೆಕ್ಸ್ ಬುಕ್‌ಗೆ ನೋಂದಣಿ ಮಾಡಲಾಗುತ್ತಿದೆ. ನಂತರದಲ್ಲಿ ಕಂಪ್ಯೂಟರೀಕರಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಕುಳಿತಲ್ಲೇ ತುರ್ತಾಗಿ ಬೇಕಿರುವ ದಾಖಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಮತ್ತೊಂದು ವಿಶೇಷ ಎಂದರೆ ಈ ಕಾರ್ಯಕ್ಕೆ ಸರ್ಕಾರದ ನಯಾಪೈಸೆ ಹಣ ಬಳಕೆ ಮಾಡುತ್ತಿಲ್ಲ. ತಹಸೀಲ್ದಾರ್ ಮತ್ತು ಸಿಬ್ಬಂದಿಯ ಕಾರ್ಯವೈಖರಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಸಾರ್ವಜನಿಕರು ತಿಂಗಳುಗಟ್ಟಲೆ ಅಲೆಯುವುದು, ಕಡತ ಹುಡುಕಾಡುವುದು ತಪ್ಪಲಿದೆ. ಇಂಥ ಅಚ್ಚುಕಟ್ಟು ವ್ಯವಸ್ಥೆ ಹಾಸನ ತಾಲೂಕು ಕಚೇರಿಯಲ್ಲಿ ಆಗುತ್ತಿರುವುದು ಮಾದರಿ ಎನಿಸಿದೆ.
‘‘ತಾಲೂಕು ಕಚೇರಿಯಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಬೇಡವಾದ ದಾಖಲೆ ಇದ್ದವು. ಉದಾಹರಣೆಗೆ ಪಿಂಚಣಿ ಪಡೆಯುತ್ತಿದ್ದವರು, ಖಾತೆ ಬದಲಾವಣೆ ಮಾಡಿಸಿಕೊಂಡಿದ್ದವರು ಗತಿಸಿ ಹೋಗಿದ್ದರೂ, ಅಂತಹವರ ದಾಖಲೆಗಳು ಇಲ್ಲೇ ಇವೆ. ಇದರಿಂದ ಕಚೇರಿ ಒಳಗೆ ಸ್ಥಳಾವಕಾಶ ಇಲ್ಲದೆ ಎಲ್ಲೋ ಕಡತಗಳನ್ನು ಹೊರಗಡೆ ಇಡಲಾಗಿತ್ತು. ಇದೀಗ ಅಂತಹ ಕಡತಗಳನ್ನು ವಿಲೇವಾರಿ ಮಾಡಿ, ಬೇಕಿರುವ ದಾಖಲೆಗಳನ್ನು ಒಂದೊಂದಾಗಿ ಅಚ್ಚುಕಟ್ಟಾಗಿ ಜೋಡಿಸಲಾಗುತ್ತಿದೆ. ಇಲ್ಲ ಎನ್ನಲಾಗಿದ್ದ, 60 ಅಗತ್ಯ ಕಡತಗಳು ವಿಲೇವಾರಿ ಸಂದರ್ಭದಲ್ಲಿ ಸಿಕ್ಕಿವೆ. ಈ ಕಾರ್ಯದಿಂದ ಜನರಿಗೆ ಬೇಕಿರುವ ದಾಖಲೆಗಳು ಸುಲಭವಾಗಿ ಸಿಗಲಿವೆ. ಜನರ ಸಮಯ ಉಳಿತಾಯ ಆಗಿ, ಸಿಬ್ಬಂದಿಯ ಕೆಲಸವೂ ಸುಲಭವಾಗಲಿದೆ. ಸದ್ಯ ಶೇ.40ರಷ್ಟು ಕಡತ ಜೋಡಣೆ ಕಾರ್ಯ ಮುಗಿದಿದ್ದು, ಇನ್ನೂ ಶೇ.60 ರಷ್ಟು ಬಾಕಿ ಇದೆ. ಶೀಘ್ರ ಪೂರ್ಣಗೊಳಿಸಲಾಗುವುದು.-ವಿ. ನಟೇಶ್, ತಹಸೀಲ್ದಾರ್.
‘‘ಒಂದು ಗ್ರಾಮದ ಕಡತಗಳು, ಒಂದೇ ಕಡೆ ಸಿಗಬೇಕು. ಜನರ ಕೆಲಸ ಒಂದೇ ದಿನದಲ್ಲಿ ಆಗಬೇಕು. ರೈತರಿಗೆ ಅನುಕೂಲ ಆಗಬೇಕು ಎಂದು ತಹಸೀಲ್ದಾರ್ ಸಾಹೇಬ್ರು ಮುತುವರ್ಜಿ ವಹಿಸಿ ಈ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಮಾತ್ರವಲ್ಲದೆ, ನಮ್ಮಂತ ನೌಕರರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಈ ಕೆಲಸ ನಮಗೆ ನಿಜಕ್ಕೂ ಹೊರೆ ಎನಿಸಿಲ್ಲ. ಖುಷಿಯಿಂದ ಮಾಡುತ್ತಿದ್ದೇವೆ.’’-ಲಕ್ಷ್ಮೀಶ್, ಪ್ರಥಮ ದರ್ಜೆ ಸಹಾಯಕ
‘‘ಈ ಹಿಂದೆ ಯಾವುದೇ ಕಡತಗಳು ಕ್ರಮಬದ್ಧವಾಗಿರಲಿಲ್ಲ. ಜಾಗದ ಕೊರತೆ ಇತ್ತು. ಈಗ ಬೇಡವಾದ ಕಡತಗಳನ್ನು ತೆಗೆಯುತ್ತಿದ್ದೇವೆ. ಶಾಶ್ವತ ಕಡತಗಳನ್ನು ಶಿಸ್ತುಬದ್ಧವಾಗಿ ಜೋಡಿಸುತ್ತಿದ್ದೇವೆ. ಹರಿದಿದ್ದ ದಾಖಲೆಗಳನ್ನು ಹೊಲಿದು ಸರಿಪಡಿಸಲಾಗುತ್ತಿದೆ. ನಮ್ಮ ನಿತ್ಯದ ಕೆಲಸ ಮುಗಿದ ನಂತರ ಹೆಚ್ಚುವರಿ ಆಗಿ 2 ಗಂಟೆಗಳ ಕಾಲ ಮತ್ತು ರಜಾದಿನಗಳಲ್ಲೂ ಈ ಕೆಲಸ ಮಾಡುತ್ತಿರುವುದು ನಮಗೆ ತೃಪ್ತಿ ಎನಿಸಿದೆ. ಅಭಿಲೇಖಾಲಯ ಗಣಕೀಕರಣ ಆದ ನಂತರ ಸರಳ ಮತ್ತು ಅತಿಶೀಘ್ರವಾಗಿ ಬೇಕಾದ ದಾಖಲೆಗಳು ಸಿಗಲಿವೆ.’’-ಫರ್‌ಹೀನ್, ಗ್ರಾಮ ಲೆಕ್ಕಾಧಿಕಾರಿ