ಪಾಂಡವಪುರ: ತಾಲೂಕು ಆಡಳಿತಸೌಧದಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ದಲ್ಲಾಳಿಗಳಿಗೆ ಕಡಿವಾಣ ಹಾಕುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳು ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಇಲಾಖೆಗೆ ನೇರವಾಗಿ ಬರುವ ಸಾರ್ವಜನಿಕರು ಮತ್ತು ರೈತರ ಕೆಲಸಗಳನ್ನು ತಡ ಮಾಡದೆ ಮಾಡಿಕೊಡಬೇಕು. ಇಲಾಖೆಯ ಕೆಲಸ ಕಾರ್ಯಗಳಲ್ಲಿ ದಲ್ಲಾಳಿಗಳು ಪಾತ್ರ ವಹಿಸುವುದನ್ನು ಸಹಿಸುವುದಿಲ್ಲ. ಇದಕ್ಕೆಲ್ಲ ನೀವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದಲ್ಲಾಳಿಗಳ ಹಾವಳಿ ಕುರಿತಂತೆ ‘ವಿಜಯವಾಣಿ’ ಪತ್ರಿಕೆಯಲ್ಲೂ ವರದಿ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿ, ಇಲಾಖೆಯಲ್ಲಿ ಆ ರೀತಿಯ ಯಾವುದೇ ತೊಂದರೆಗಳಿಲ್ಲ. ದಲ್ಲಾಳಿಗಳು ಯಾರೆಂದು ಸಾರ್ವಜನಿಕರು ದೂರು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೆಳಗಿನಿಂದ ಸಂಜೆಯವರೆಗೆ ಯಾವುದಾದರೊಂದು ಸೆಷನ್‌ನಲ್ಲಿ ನಾನು ಕಚೇರಿಯಲ್ಲಿ ಲಭ್ಯವಿರುತ್ತೇನೆ. ಸಾರ್ವಜನಿಕರು ನೇರವಾಗಿ ಬಂದರೆ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಾಗಿ ಶಾಸಕರಿಗೆ ಸಮಜಾಯಿಷಿ ನೀಡಿದರು.
ಜೂ.24, 25 ರಂದು ಅಧಿಕಾರಿಗಳ ಸಭೆ: ತಾಲೂಕು ಕಚೇರಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವುದು ಸೇರಿದಂತೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಸಾರ್ವಜನಿಕರ ಕೆಲಸ ಕಾರ್ಯಗಳ ಕಡತಗಳನ್ನು ಶೀಘ್ರ ವಿಲೇವಾರಿಗಾಗಿ ಜೂ.24 ಮತ್ತು 25 ರಂದು ತಾಲೂಕು ಕಚೇರಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ನೌಕರರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಮಧ್ಯವರ್ತಿಗಳ ವಿಚಾರ ಸೇರಿದಂತೆ ಎಲ್ಲವನ್ನೂ ಚರ್ಚೆ ಮಾಡಲಾಗುವುದು ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ತಿಳಿಸಿದರು.