ಜಿಲ್ಲೆ

ತಾಲೂಕು ಕಚೇರಿ ಕೆಲಸ ಚುರಕಾಗಲಿ

ಬೇಲೂರು: ಇತ್ತೀಚಿನ ದಿನಗಳಲ್ಲಿ ತಾಲೂಕು ಕಚೇರಿಯಲ್ಲೂ ರೈತರು, ಕೂಲಿ ಕಾರ್ಮಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬರುತಿದ್ದು, ತಹಸೀಲ್ದಾರರು ಈ ಬಗ್ಗೆ ಗಮನ ಹರಿಸಿ ಕೆಲಸ ಮಾಡಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ನಿರ್ದೇಶನ ನೀಡಿದರು.


ತಾಲೂಕಿನ ಕನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮೀನಿನ ಸಾಗುವಳಿಗಾಗಿ ಕಂದಾಯ ಇಲಾಖೆಯಲ್ಲಿ ಹಾಕಿರುವ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ ಕಳೆದ ಸಾಲಿನಲ್ಲಿ ಕೆಲ ಅಧಿಕಾರಿಗಳ ತಪ್ಪಿನಿಂದ ಬಡವರು ಮತ್ತು ದೀನ ದಲಿತರಿಗೆ ಸಿಗಬೇಕಾದ ಭೂಮಿ ಉಳ್ಳವರ ಪಾಲಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ದಾಖಲೆ ಪರಿಶೀಲನೆಗಾಗಿ ಸಾಗುವಳಿ ಪತ್ರ ವಿತರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಹೀಗಾಗಿ ಅರ್ಜಿಗಳ ವಿಲೇವಾರಿ ವಿಳಂಬವಾಗಿದೆ. ಈಗಾಗಲೇ ನಾನು ಈ ಸಂಬಂಧ ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿದ್ದು, ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.


ಕಂದಾಯ ಇಲಾಖೆಗೆ ಬರುವ ಪ್ರತಿ ಸಾರ್ವಜನಿಕರ ಕೆಲಸ- ಕಾರ್ಯಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಡಿಕೊಡಬೇಕು. ಕನಾಯಕನಹಳ್ಳಿ ಗ್ರಾಮಕ್ಕೆ ಈಗಾಗಲೇ ಮೂಲಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾನು ಬದ್ಧ ಎಂದರು.


ಇದುವರೆಗೆ ಬೇಲೂರು ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಿಗೆ ಒಂದಲ್ಲ ಒಂದು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಮಾಡಿಸಲಾಗಿದೆ. ಬೇಲೂರು ಕ್ಷೇತ್ರದ ಅಭಿವೃದ್ಧಿ ನನಗೆ ತೃಪ್ತಿ ತಂದಿದೆ. ನಾನು ವಿರೋಧ ಪಕ್ಷದವನಾಗಿದ್ದರೂ ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.


ಜೆಡಿಎಸ್ ಮುಖಂಡ ಕನಾಯಕನಹಳ್ಳಿ ಮಹಾದೇವ ಮಾತನಾಡಿ, ಯಗಚಿ ಜಲಾಶಯ ನಿರ್ಮಾಣದ ಸಂದರ್ಭ ಕನಾಯಕನಹಳ್ಳಿ ಗ್ರಾಮಸ್ಥರು ತಮ್ಮ ಭೂಮಿ ಕಳೆದುಕೊಂಡು ಇಲ್ಲಿಗೆ ಬಂದು ವಾಸವಾಗಿದ್ದರೂ ಕಂದಾಯ ಇಲಾಖೆಯಿಂದ ಬಹುತೇಕ ದಾಖಲಾತಿಗಳು ಇನ್ನು ಬದಲಾವಣೆಯಾಗಿಲ್ಲ. ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹರಿದು ಹಂಚಿದ ಭೂಮಿ ಮತ್ತು ಮನೆ ನಿವೇಶನಗಳು ಒಂದೆಡೆ ಸಿಗುವಂತೆ ಮಾಡಲು ಗ್ರಾಮಸ್ಥರಿಗೆ ಸಹಕಾರ ನೀಡಬೇಕು. ಸೂಕ್ತ ದಾಖಲಾತಿ ಇಲ್ಲದೆ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ. ಇನ್ನೂ ಸೆಸ್ಕ್ ನಿಂದ ಭಾರಿ ತೊಂದರೆಯಾಗುತ್ತಿದೆ. ಶಾಸಕ ಕೆ.ಎಸ್.ಲಿಂಗೇಶ್ ಅವರು ಕನಾಯಕನಹಳ್ಳಿ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರಲ್ಲದೆ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದ್ದು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ತಹಸೀಲ್ದಾರ್ ರಮೇಶ್ ಮಾತನಾಡಿ, ಪ್ರತಿ ತಿಂಗಳು ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಈ ಬಾರಿ ಕನಾಯಕನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಇದರಿಂದ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲಾಗಿದೆ. ಒಟ್ಟು 29 ಅರ್ಜಿಗಳಲ್ಲಿ ಬಂದಿದ್ದು, ಕಂದಾಯ ಇಲಾಖೆಗೆ 23, ಸರ್ವೆಗೆ 1, ಆರ್‌ಡಿಪಿಆರ್ 4 ಹಾಗೂ ಸೆಸ್ಕ್ ಗೆ ಸಂಬಂಧಿಸಿದ ಅರ್ಜಿಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.


ಇದೇ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕುರಿತ ಅರ್ಜಿಗಳ ಅಧಿಕಾರಿಗಳಿಗೆ ಸಲ್ಲಿಸಿದರು. ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಇಒ ಸುನಿತಾ, ಬಂಟೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿತಾ, ಉಪಾಧ್ಯಕ್ಷ ದಾಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು, ಪ್ರಸನ್ನ, ಪಿಡಿಒ ರಾಜಶೇಖರ, ಗ್ರಾಪಂ ಸದಸ್ಯರಾದ ಸುಧಾ, ಶಿವಮ್ಮ, ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.