ಜಿಲ್ಲೆ

ತಾಲೂಕು ಏಳನೇ ಸಾಹಿತ್ಯ ಸಮ್ಮೇಳನಕ್ಕೆ ದಡ್ಡೆ ಸರ್ವಾಧ್ಯಕ್ಷ

ಬೀದರ್: ಬೀದರ್ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಇತಿಹಾಸ ಉಪನ್ಯಾಸಕ, ಸಾಹಿತಿ ಓಂಪ್ರಕಾಶ ದಡ್ಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಕಸಾಪ ಕಚೇರಿಯಲ್ಲಿ ಏರ್ಪಡಿಸಿದ ಸಭೆಯಲ್ಲಿ ಚರ್ಚೆ ನಡೆಸಿ, ದಡ್ಡೆ ಅವರನ್ನು ಸರ್ವಾಧ್ಯಕ್ಷರಾಗಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಇನ್ನೊಮ್ಮೆ ಸಭೆ ಸೇರಿ ಸಮ್ಮೇಳನ ದಿನಾಂಕ ನಿಗದಿಗೊಳಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಗಡಿನಾಡು ಪ್ರತಿನಿಧಿ ಶಿವಕುಮಾರ ಕಟ್ಟೆ, ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ, ಕೋಶಾಧ್ಯಕ್ಷ ಟಿ.ಎಂ ಮಚ್ಚೆ, ಕಲ್ಯಾಣರಾವ ಚಳಕಾಪುರೆ, ಸಂಗಮೇಶ ಜ್ಯಾಂತೆ ಇತರರಿದ್ದರು.

ತಾಲೂಕಿನ ಯರನಳ್ಳಿ ಗ್ರಾಮದ ಓಂಪ್ರಕಾಶ ದಡ್ಡೆ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಪಿಎಚ್ಡಿ ಸಂಶೋಧನೆ ಮಾಡುತ್ತಿರುವಾಗಲೇ ಸರ್ಕಾರಿ ಕಾಲೇಜು ಉಪನ್ಯಾಸಕರಾಗಿ ಸೇವೆಗೆ ಸೇರಿದರು.2014ರಲ್ಲಿ ಸರ್ಕಾರದಿಂದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಇವರು, ಸರ್ಕಾರದ ಪದವಿಪೂರ್ವ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.

ಉಪನ್ಯಾಸಕ ವೃತ್ತಿಯೊಂದಿಗೆ ಮೂರು ದಶಕಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಹಲವು ಕಥೆ, ಕವನ, ಕೃತಿ ರಚಿಸಿದ್ದಾರೆ. ಬಸವಣ್ಣ (ಸಂಪಾದನೆ), ಮಗು ನೀ ಜ್ಞಾನಿಯಾಗು, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಮಕ್ಕಳಿಗಾಗಿ ನಾವು, ಬೇಮಳಖೇಡ ಇತಿಹಾಸ, ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿ, ನಾ ಕಂಡ ಮಥೂರಾ ಪ್ರವಾಸ ಕಥನ ಪ್ರಕಟಿಸಿದ್ದಾರೆ.