ಜಿಲ್ಲೆ

ತಾಲೂಕಿನಲ್ಲಿ ಕಳ್ಳಬಟ್ಟಿ ದಂಧೆ ಜೋರು

ಚಿಂತಾಮಣಿ : ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾಡಲು ಸರ್ಕಾರೇತರ ಸಂಘ-ಸಂಸ್ಥೆಗಳ ಜತೆ ಸಮನ್ವಯ ಸಾಧಿಸುವ ಸಭೆಯಲ್ಲಿ ಹಲವಾರು ಮುಖಂಡರು ಮಾತನಾಡಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಕ್ರಮ ಕಳ್ಳಬಟ್ಟಿ ದಂಧೆ ಜೋರಾಗಿ ನಡೆಯುತ್ತಿದೆ ಎಂದು ದೂರಿದರು.

ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರದಿಂದ ದ್ರಾಕ್ಷಿ, ಬಾಳೆಹಣ್ಣು, ಹೂವುಗಳನ್ನು ತಂದು ಮಾರುವುವರ ಸಂಖ್ಯೆ ಜಾಸ್ತಿಯಾಗಿದೆ. ತಾಲೂಕಿನಲ್ಲಿ ಕರೊನಾ ಸೋಂಕು ತಡೆಯಬೇಕಾದರೆ ಅಲ್ಲಿನ ವ್ಯಾಪಾರಸ್ಥರಿಗೆ ಕಡಿವಾಣ ಹಾಕಬೇಕು ಎಂದು ಮುಖಂಡ ವಿಮಲ್ ಪ್ರಕಾಶ್ ಅಗ್ರಹಿಸಿದರು.

ನಗರದಲ್ಲಿ ಕೆಲ ವೈನ್ಸ್ ಮತ್ತು ಬಾರ್ ರೆಸ್ಟೋರೆಂಟ್ ಮಾಲೀಕರು ಅಂಗಡಿಗಳ ಹಿಂಬಾಗಿಲಿನಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದು 60 ರಿಂದ 70 ರೂಗಳ ಬಾಟಲನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕುವಂತೆ ಮುಖಂಡರು ಆಗ್ರಹಿಸಿದರು.

ನಗರದ ಬಹುತೇಕ ದಿನಸಿ ಮತ್ತಿತರ ಅಂಗಡಿ ವ್ಯಾಪಾರಿಗಳು ಅಗತ್ಯಕ್ಕಿಂತ ಹೆಚ್ಚು ಧರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಸಭಯೆಲ್ಲಿ ಭಾಗವಹಿಸಿದ್ದ ಎಲ್ಲ ಕನ್ನಡಪರ ಮತ್ತು ದಲಿತ ಸಂಘಟನೆ ಮುಖಂಡರು ಆರೋಪಿಸಿದಾಗ ತಹಸೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಈ ಬಗ್ಗೆ ಗಮನಕ್ಕೆ ತಂದರೆ ಕೂಡಲೇ ಅಂಗಡಿ ಮೇಲೆ ದಾಳಿ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಪೌರಾಯುಕ್ತ ಹರೀಶ್, ದಸಂಸದ ವಿಜಯನಾರಾಸಿಂಹ, ಕರವೇ ಮುಖಂಡರಾದ ವಡ್ಡಹಳ್ಳಿ ನಾರಾಯಣಸ್ವಾಮಿ, ಶಬ್ಬೀರ್ ಅಹಮದ್, ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸುನೀಲ್, ಎಬಿವಿಪಿಯ ಮಂಜುನಾಥರೆಡ್ಡಿ, ಸೇರಿ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.