ಹುಣಸಗಿ: ತಾಲೂಕಿನಲ್ಲಿ ಕೈಗೊಂಡಿರುವ ಜೆಜೆಎಂ ಹಾಗೂ ಜಲಧಾರೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವಿಶ್ ಓರ್ಡಿಯಾ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ದ್ಯಾಮನಹಾಳ, ರಾಜವಾಳ ಸೇರಿ ಇತರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ನಲ್ಲಿ ಹಾಗೂ ಪೈಪ್ ಹಾಳಾಗಿರುವುದನ್ನು ಪರಿಶೀಲಿಸಿ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಲ್ಲದೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಎಚ್.ಡಿ ಪಾಟೀಲ್ ತಾಕೀತು ಮಾಡಿದರು.
ದ್ಯಾಮನಾಳ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು ಪೊರೈಕೆ ನಲ್ಲಿಗಳ ಜತೆಗೆ ವೈಯಕ್ತಿಕ ಶೌಚಗೃಹ ಬಳಕೆ ಮಾಡದೆ ಇರುವುದನ್ನು ಕಂಡು ಮಹಿಳೆಯರಿಗೆ ಶೌಚಗೃಹ ಬಳಕೆ ಮಾಡಿಕೊಳ್ಳುವಂತೆ ತಿಳಿ ಹೇಳಿದರು. ಅಲ್ಲದೆ ಈ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಾಳನೂರ ಗ್ರಾಪಂ ಪಿಡಿಒ ಅವರಿಗೆ ಸೂಚನೆ ನೀಡಿದರು.
ಗ್ರಾಮಸ್ಥರ ಮನವಿ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಲು ನಮ್ಮೂರಿನಲ್ಲಿ ಗ್ರಂಥಾಲಯ ಕಲ್ಪಿಸಿಕೊಡಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಅದು ಬಹಳ ದಿನಗಳಿಂದ ಕೆಟ್ಟಿದ್ದು, ಕೂಡಲೇ ಅದನ್ನು ದುರಸ್ತಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಗ್ರಂಥಾಲಯಕ್ಕೆ ಜಾಗ ಇದ್ದರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣನಾಯಕ, ಎಇಇ ಎಚ್.ಡಿ.ಪಾಟೀಲ್ ಹಾಗೂ ಗ್ರಾಪಂ ಸದಸ್ಯರಾದ ಪ್ರಭುದೇವ ನೀಲಗಾರ, ನಾನಗೌಡ ಪೊಲೀಸ್ ಪಾಟೀಲ್, ನಿಂಗಪ್ಪ ದೇವರಮನಿ, ಮೌನೇಶಗೌಡ ಮೇಟಿ ಇತರರಿದ್ದರು.