ನಾಗಮಂಗಲ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಯೀಂಉನ್ನಿಸಾ, ಮಹೇಶ್ ಇದ್ದರು. 
ಜಿಲ್ಲೆ

ತಾಲೂಕಿನ ವಿವಿಧ ಕಚೇರಿಗಳಿಗೆ ಡಿಸಿ ದಿಢೀರ್ ಭೇಟಿ

ನಾಗೇಶ ಎಸ್

ನಾಗಮಂಗಲ: ಜಿಲ್ಲಾಧಿಕಾರಿಯಾಗಿ ಡಾ.ಕುಮಾರ್ ಅವರು ಸೋಮವಾರ ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪಟ್ಟಣದ ತಾಲೂಕು ಆಡಳಿತಸೌಧದಲ್ಲಿರುವ ಕಂದಾಯ ಇಲಾಖೆಯ ವಿವಿಧ ಶಾಖೆಗಳು, ಉಪನೋಂದಣಾಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಡಳಿತಸೌಧದ ಆರ್‌ಟಿಸಿ ಶಾಖೆ, ರೆಕಾರ್ಡ್ ರೂಂ, ಭೂಮಿಶಾಖೆ, ಆರ್‌ಆರ್‌ಟಿ ಶಾಖೆ, ಟಪಾಲು ಶಾಖೆಗಳ ಕುರಿತು ಮಾಹಿತಿ ಪಡೆದರು.

ನಂತರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲವೆಡೆ ಲೋಪಗಳು ಕಂಡುಬಂದಿದ್ದು, ಇವುಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ರೈತ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರೈತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಸೂಚಿಸಿ, ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದರು.

ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ್, ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಅಲ್ಲಿ ನೆರೆದಿದ್ದ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಕೂಡಲೇ ಸಿಸಿ ಕ್ಯಾಮರಾ ಅಳವಡಿಸುವಂತೆ ಉಪನೋಂದಣಾಧಿಕಾರಿ ಮಹೇಶ್ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಹೊರರೋಗಿಗಳ ವಿಭಾಗ ಹಾಗೂ ಒಳರೋಗಿಗಳ ಆರೋಗ್ಯ ವಿಚಾರಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಅವರಿಂದ ಮಾಹಿತಿ ಪಡೆದರು. ನಂತರ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ನಂತರ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ತಹಸೀಲ್ದಾರ್ ನಯೀಂಉನ್ನಿಸಾ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಎಡಿಎಲ್‌ಆರ್ ಪ್ರಮೋದ್, ಪುರಸಭೆ ಆರೋಗ್ಯ ನಿರೀಕ್ಷಕ ಮೂರ್ತಿ, ಕಸಬಾ ರಾಜಸ್ವ ನಿರೀಕ್ಷಕ ಗೋವಿಂದರಾಜು, ಗ್ರಾಮ ಆಡಳಿತಾಧಿಕಾರಿ ಕುಮಾರ್ ಇದ್ದರು.