ಚನ್ನರಾಯಪಟ್ಟಣ: ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಆಸ್ಪತ್ರೆಗಳಿಗೂ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 50 ಲಕ್ಷ ರೂ. ವೆಚ್ಚದ ಬ್ಲಾಕ್ ಮಟ್ಟದ ಸಾರ್ವಜನಿಕ ಪ್ರಯೋಗಾಲಯದ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಡ ಜನತೆಗೆ ಸಕಾಲಕ್ಕೆ ಆರೋಗ್ಯ ಸೇವೆಗಳು ದೊರಕಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ13.40 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಆರೋಗ್ಯ ಸಚಿವರೊಂದಿಗೆ ಮಾತನಾಡಿ ಮಂಜೂರು ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರಯೋಗಾಲಯವನ್ನು ನಿರ್ಮಾಣ ಮಾಡಲಾಗುತ್ತಿದ್ದು ಬ್ಲಾಕ್ ಮಟ್ಟದ ಸಾರ್ವಜನಿಕ ಪ್ರಯೋಗಾಲಯ ಕಾರ್ಯ ಆರಂಭಿಸಿದರೆ ಪಶು ವೈದ್ಯರು ಸಹ ಇದರಲ್ಲಿ ಕಾರ್ಯ ನಿರ್ವಹಿಸುವುದರಿಂದ ಪಶುಗಳಲ್ಲಿ ಕಂಡು ಬರುವ ರೋಗಗಳನ್ನು ನಿರ್ಣಯ ಮಾಡಲು ಹಾಗೂ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಜತೆಗೆ ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದ್ದು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದಲ್ಲಿ ಎರಡು ಕಡೆ ನಮ್ಮ ಕ್ಲಿನಿಕ್ ತೆರೆಯಲಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಹೆಚ್ ಬಿಎಒನ್ ಸಿ ಪರೀಕ್ಷೆ ಯಂತ್ರಗಳನ್ನು ಖರೀದಿಸಿ ನೀಡಲಾಗುವುದು ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿ ಡಾ.ವಿ.ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ರೋಗ ನಿರ್ಣಯಕ್ಕೆ ಈ ಮೊದಲು ಹಾಸನಕ್ಕೆ ಮಾದರಿಯನ್ನು ಕಳಿಸಿ ಕೊಡಬೇಕಾಗಿತ್ತು. ಆದರೆ ಬ್ಲಾಕ್ ಮಟ್ಟದ ಸಾರ್ವಜನಿಕ ಪ್ರಯೋಗಾಲಯ ಕಾರ್ಯ ಆರಂಭಿಸಿದರೆ ಸಾಂಕ್ರಾಮಿಕ ರೋಗಗಳು ಮುಂಚಿತವಾಗಿ ಹರಡುವುದನ್ನು ಗುರುತಿಸುವುದು ಎಲ್ಲ ಮಟ್ಟಗಳಲ್ಲೂ ವಿಶ್ಲೇಷಿಸಿ ಸಾಂಕ್ರಾಮಿಕೇತರ ರೋಗಗಳಿಂದಾಗುವ ಅನಾರೋಗ್ಯಕ್ಕೆ ತುರ್ತಾಗಿ ಚಿಕಿತ್ಸೆ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಇಲ್ಲೇ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಈ ಪ್ರಯೋಗಾಲಯದ ಮುಖ್ಯ ಉದ್ದೇಶ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ಆರ್ ಎಂ ಸಿ ನಿರ್ದೇಶಕ ಅನಿಲ್ ಮರಗೂರು, ಗುತ್ತಿಗೆದಾರ ನಾಗಪ್ಪ, ಮುಖಂಡರಾದ ಶಿವಣ್ಣ, ವೈದ್ಯರಾದ ಡಾ.ಲಕ್ಷ್ಮೀಶಂಕರ್, ಡಾ. ಚಿನ್ನ ನಾಗಪ್ಪ, ಗುರುಮೂರ್ತಿ ಹಾಗೂ ಸಿಬ್ಬಂದಿ ಇದ್ದರು.