ಬೆಟ್ಟದಪುರ: ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಶಾಶ್ವತ ಯೋಜನೆಗಳನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಜಾತಿ, ಪಕ್ಷ ಎಂಬ ಭೇದಭಾವ ಮಾಡದೆ ಸಂಪೂರ್ಣವಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ, ಕಳೆದ ಚುನಾವಣೆಯಲ್ಲಿ ಜನರು ಯಾಕೆ ನನ್ನ ಮರೆತರು ಎಂಬುದು ತಿಳಿದಿಲ್ಲ. ಅಲ್ಲದೆ, ಈಗಿನ ಶಾಸಕರ ಆಡಳಿತ ಕಂಡಿರುವರು ಬೇಸತ್ತು ನಮ್ಮ ಪಕ್ಷಕ್ಕೇ ಸೇರ್ಪಡೆಯಾಗತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದರು.
ಬೆಣಗಾಲು ಗ್ರಾಮದ ಧನರಾಜ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ನೇಮಕಾತಿ ಪತ್ರವನ್ನು ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್‌ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಅಡಗೂರು ಸುರೇಶ್, ರೇಣುಕಾ ಸತೀಶ್, ಮುಖಂಡರಾದ ಯೋಗೇಶ್‌ಗೌಡ, ಸತೀಶ್, ಸಿ.ಜಿ ರವಿ, ಸಿ.ಎನ್ ರಾಜೇಶ್, ಸಿ.ಜೆ ರವಿ, ಕೀರ್ತಿ, ಮೋಹನ್ ಇದ್ದರು.