ಜಿಲ್ಲೆ

ತಾಲೂಕಿಗೆ 380 ಓವರ್ ಹೆಡ್ ಟ್ಯಾಂಕ್ ಮಂಜೂರು


ಚನ್ನರಾಯಪಟ್ಟಣ: ತಾಲೂಕಿನ 380 ಗ್ರಾಮಗಳಿಗೆ ಜಲ ಜೀವನ್ ಮೆಷಿನ್ ಯೋಜನೆಯಡಿ ಓವರ್ ಹೆಟ್ ಟ್ಯಾಂಕ್‌ಗಳು ಮಂಜೂರಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ದಿಡಗ ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಕಲ್ಪಿಸುವ ಮಹತ್ಕಾಂಕ್ಷಿ ಯೋಜನೆ ಇದಾಗಿದೆ ಎಂದರು.


ಮುಂದಿನ 3-4 ತಿಂಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಳ್ಳಲಿದ್ದು ತಕ್ಷಣದಿಂದಲೇ ಮನೆ ಮನೆಗೂ ನಲ್ಲಿಗಳಲ್ಲಿ ಅಳವಡಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ. ಈ ಯೋಜನೆಯಿಂದ ತಾಲೂಕಿನ ಕುಡಿಯುವ ನೀರಿನ ಬರ ಇಂಗಲಿದೆ ಎಂದು ತಿಳಿಸಿದರು.


ತಾಲೂಕಿನ ಎರಡನೇ ಪಟ್ಟಣವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರ ಹಿರೀಸಾವೆ ಗ್ರಾಮಕ್ಕೆ 2 ಲಕ್ಷ ಹಾಗೂ 1 ಲಕ್ಷ ಲೀಟರ್ ಸಾಮರ್ಥ್ಯದ 2 ಟ್ಯಾಂಕ್ ನಿರ್ಮಿಸಲಾಗುವುದು. ಅಲ್ಲದೇ ಜಮೀನುಗಳಲ್ಲಿ ಇರುವ ಮನೆಗಳಿಗೂ ಈ ಯೋಜನೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.


ದಿಡಗ ಗ್ರಾಮದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನು ದಿಡಗ ಹಾಗೂ ಬಾಳಗಂಚಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸುವ ಸಲುವಾಗಿ ಮುದಿಬೆಟ್ಟಕಾವಲು ಬಳಿ ಉಪ ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪಿಸಲು ಈಗಾಗಲೇ ಜಮೀನು ಗುರುತಿಸಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.


ಸರ್ಕಾರವು ಕ್ವಿಂಟಾಲ್ ಕೊಬ್ಬರಿಗೆ 11,750 ರೂ. ನಿಗಧಿ ಮಾಡಿದ್ದು ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು. ತಲಾ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ. ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರ ಬದುಕು ಅಸನಾಗಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.


ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಘುರಾಮ್, ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜ್, ದಿಡಗ ಸೊಸೈಟಿ ಅಧ್ಯಕ್ಷ ಪಿ.ಕೆ.ಶಿವಶಂಕರ್, ಮಾಜಿ ಅಧ್ಯಕ್ಷರಾದ ಎಚ್.ಕೆ.ಯೋಗೇಶ್, ಎಸ್.ಕುಮಾರ್, ನಿಂಗೇಗೌಡ, ತಾಪಂ ಇಒ ಸುನೀಲ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯರು, ಜೆಜೆಎಂ ಸಹಾಯಕ ಇಂಜಿನೀಯರ್ ನಳಿನಾ, ಪ್ರಕಾಶ್, ಗುತ್ತಿಗೆದಾರ ಮುರುಗೇಶ್ ಹಾಗೂ ಇತರರು ಇದ್ದರು.

ಹೋಬಳಿ ಕೇಂದ್ರದ ಮಟ್ಟಕ್ಕೆ ಬೆಳೆಯುತ್ತಿರುವ ದಿಡಗ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲು ವ್ಯವಸ್ಥೆ ಮಾಡಲಾಗಿದ್ದು ಶೀಘ್ರ ಪ್ರಾರಂಭಿಸಲಾಗುವುದು. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸ್ವಸಹಾಯ ಸಂಘಗಳಿಗೆ ವಾರದೊಳಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು.ಸಿ.ಎನ್.ಬಾಲಕೃಷ್ಣ, ಶಾಸಕ