ಚಿತ್ರದುರ್ಗ: ಜಿಲ್ಲಾಡಳಿತ ಯಾವ ತಾರತಮ್ಯವಿಲ್ಲದೆ, ಕೂಡಲೇ ನಗರದ ಮುಖ್ಯ ರಸ್ತೆಗಳ ವಿಸ್ತರಣೆಗೆ ಮುಂದಾಗಬೇಕೆಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಿಂದಿನಂತೆ ಕೇವಲ ಗುರುತು ಮಾಡಿದರೆ ಸಾಲದು. ನಿಯಮಾನುಸಾರ ರಸ್ತೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಚಳ್ಳಕೆರೆ ಗೇಟ್‌ನಿಂದ ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ ಹಾಗೂ ಮೆದೇಹಳ್ಳಿ ಸೇರಿ ಇನ್ನಿತರೆ ರಸ್ತೆ ವಿಸ್ತರಣೆಯಾಗದ ಕಾರಣ ಕಿಷ್ಕಿಂಧೆಯಂತಿರುವ ಮಾರ್ಗಗಳಲ್ಲಿ ಬಸ್, ಲಾರಿ, ಕಾರು, ಆಟೋ, ದ್ವಿಚಕ್ರ ವಾಹನಗಳು ಸಂಚರಿಸುವಾಗ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪಾದಚಾರಿಗಳಿಗೆ ಫುಟ್‌ಪಾತ್ ಕೂಡ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ, ನಗರಸಭೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸುಗಮ ಸಂಚಾರಕ್ಕಾಗಿ ರಸ್ತೆ ವಿಸ್ತರಣೆಗೆ ಮುಂದಾಗಬೇಕು. ಒತ್ತುವರಿ ಆಗಿರುವ ಕಡೆಗಳಲ್ಲಿ ತೆರವಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಎಸ್.ಗೋಪಿನಾಥ್, ಅವಿನಾಶ್, ಅಖಿಲೇಶ್, ಹರೀಶ್‌ಕುಮಾರ್, ನಿರಂಜನ್ ಇತರರಿದ್ದರು.