ಚಿತ್ರದುರ್ಗ: ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ನಡುವೆ ಅಂಬಿಗರ ಚೌಡಯ್ಯ ಅವರು ಪ್ರಜ್ವಲವಾಗಿ ಬೆಳಗಿದ್ದಾರೆ ಎಂದು ಮು ರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಬುಧವಾರ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಅನುಭಾವಿ ವಚನಕಾರ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅರಿವೇ ಅಂಗ, ಆಚಾರವೇ ಶಿವ, ನಾಲಿಗೆಯೇ ಗುರುಲಿಂಗ ಎಂದ ಅಂಬಿಗರ ಚೌಡಯ್ಯನವರು ಗಣಾಚಾರ ತತ್ತ್ವಗಳನ್ನು ಹೊಂದಿದಂತಹ ಮಹಾನುಭಾವಿ. ಸಮಾಜದಲ್ಲಿದ್ದ ತರತಮಗಳ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಳನ್ನು ಭದ್ರಗೊಳಿಸಿದ ನಿಜಶರಣರಾಗಿದ್ದಾರೆ. ಕಂದಾಚಾರ, ಡಂಭಾಚಾರ, ಮೌಢ್ಯಗಳನ್ನು ನೇರ, ನಿಷ್ಠುರ ಮತ್ತು ನಿಭೀರ್ತಿಯಿಂದ ಕಟುವಾಗಿ ಟೀಕಿಸಿದ್ದ ಇವರು ಎಲ್ಲ ಶರಣರಂತೆ ಕಾಯಕಯೋಗಿಯಾಗಿದ್ದಾರೆ ಎಂದರು.
ಅಥಣಿಯ ಶ್ರೀ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, 12ನೇ ಶತಮಾನ ಜ್ಞಾನ, ಸಮಾನತೆಯ ಬೆಳಕಿನ ಶತಮಾನ. ವೈಚಾರಿಕತೆ ಬಿತ್ತಿದಂತಹ, ಸರ್ವಕಾಲಕ್ಕೂ ಪ್ರಸ್ತುತವಾದ ಶಕ್ತಿಯುತ ವಚನ ಸಾಹಿತ್ಯವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟಂತಹ ಕಾಲವಾಗಿದೆ. ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯೋಣ ಎಂದರು.
ಜೇವರ್ಗಿ ಮರುಳಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಡಾ. ಬಸವಚೇತನ ಸ್ವಾಮೀಜಿ, ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಬಸವರಾಜಕಟ್ಟಿ, ತಿಪ್ಪೇಸ್ವಾಮಿ, ಬಿ.ಟಿ.ನಂದೀಶ್, ಟಿ.ಪಿ. ಜ್ಞಾನಮೂರ್ತಿ, ನಾಗರಾಜ್ ಸಂಗಮ್, ಪೈಲ್ವಾನ್ ತಿಪ್ಪೇಸ್ವಾಮಿ,ಶಿವಾನಂದ, ಪಂಚಾಕ್ಷರಿ, ಡಾ. ಆನಂದ್, ಚನ್ನಪಟ್ಟಣದ ಉಮೇಶ್ ಇತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕಿ ಆರ್. ಅನಿತಾ ಸ್ವಾಗತಿಸಿ, ಮುಖ್ಯಶಿಕ್ಷಕಿ ಎನ್.ಎಂ. ಪುಷ್ಪವಲ್ಲಿ ವಂದಿಸಿದರು. ಶಿಕ್ಷಕಿ ಎಸ್.ಆರ್. ನೇತ್ರಾವತಿ ನಿರೂಪಿಸಿದರು.