ಜಿಲ್ಲೆ

ತಾರತಮ್ಯ ನೀತಿಯಿಂದ ರಾಜ್ಯ ಮುಕ್ತವಾಗಲಿ

ಶಾಸಕ ಕೆ.ಷಡಕ್ಷರಿ ಹೇಳಿಕೆ, ತಿಪಟೂರಿಗೆ ದೆಹಲಿಯ ಸಿಎಸಿಪಿ ಪ್ರತಿನಿಧಿಗಳು ಭೇಟಿ

ತಿಪಟೂರು: ಉಂಡೆ ಕೊಬ್ಬರಿ ಮತ್ತು ಮಿಲ್ಲಿಂಗ್​ ಕೊಬ್ಬರಿಯ ವ್ಯತ್ಯಾಸ ತಿಳಿಯದೆ ಕೇರಳ ರಾಜ್ಯದ ಮಿಲ್ಲಿಂಗ್​ ಕೊಬ್ಬರಿ ಉತ್ಪಾದನಾ ವೆಚ್ಚವನ್ನೇ ರಾಜ್ಯಕ್ಕೂ ಅನ್ವಯ ಮಾಡಿರುವ ಕೇಂದ್ರದ ತಾರತಮ್ಯ ನೀತಿಯಿಂದ ನಮ್ಮ ರಾಜ್ಯ ಮುಕ್ತವಾಗಬೇಕಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ತಾಲೂಕಿಗೆ ಭೇಟಿ ನೀಡಿದ ದೆಹಲಿಯ ಸಿಎಸಿಪಿ ಪ್ರತಿನಿಧಿ ಡಾ.ಪ್ರೇಮಚಂದ್ರ ಮತ್ತು ನಿಯೋಗದ ಜತೆ ಕೆ.ಷಡಕ್ಷರಿ ಚರ್ಚಿಸಿದ್ದು, ರಾಜ್ಯ ತೋಟಗಾರಿಕೆ ಇಲಾಖೆ ಕ್ವಿಂಟಾಲ್​ ಕೊಬ್ಬರಿಯ ಉತ್ಪಾದನಾ ವೆಚ್ಚ 19,800 ರೂ. ಎಂದು 2023 ಮತ್ತು 2024ರಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಮಾನದಂಡದಡಿ ಕೊಬ್ಬರಿಗೆ ಎಂಎಸ್​ಪಿ ಬೆಲೆ ನಿಗದಿ ಪಡಿಸಬೇಕಿರುವ ಕೇಂದ್ರ ಸರ್ಕಾರ, ಕೇರಳ ರಾಜ್ಯದ ಮಿಲ್ಲಿಂಗ್​ ಕೊಬ್ಬರಿಯ ಉತ್ಪಾದನಾ ವೆಚ್ಚದ ಮಾನದಂಡ ಅನುಸರಿಸಿ ಕ್ವಿಂಟಾಲ್​ ಕೊಬ್ಬರಿಗೆ 12 ಸಾವಿರ ರೂ. ನಿಗದಿ ಪಡಿಸಿದೆ. ಮೊದಲು ನಮ್ಮ ರಾಜ್ಯ ಕೇರಳದ ಮಿಲ್ಲಿಂಗ್​ ಕೊಬ್ಬರಿ ಮಾನದಂಡದಿಂದ ಮುಕ್ತವಾಗಬೇಕು. ಅಲ್ಲಿವರೆಗೂ ಸಮಸ್ಯೆ ಬಗೆಹರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಮಾತನಾಡಿ, ದೆಹಲಿಗೆ ನಿಯೋಗ ಹೋಗಲು ಸಿದ್ಧ ಎಂದರು.

ರೈತ ಮುಖಂಡ ಆರ್​.ಎಸ್​.ಚನ್ನಬಸವಣ್ಣ ಮಾತನಾಡಿ, ತೆಂಗಿನ ಮರದಿಂದ ಕಾಯಿ ಕಿತ್ತು, ಕೊಬ್ಬರಿ ಮಾಡಿ ಮಾರುಕಟ್ಟೆಗೆ ತರುವಷ್ಟರಲ್ಲಿ ಸಾಕಷ್ಟು ಶ್ರಮವಿದ್ದು, 10 ವರ್ಷಗಳ ಹಿಂದೆ ಇದ್ದ ವೆಚ್ಚ ಈಗ ಶೇ.25 ರಿಂದ 30 ಹೆಚ್ಚಾಗಿದೆ. ತೋಟಗಾರಿಕೆ ಇಲಾಖೆಯೂ ಕೊಬ್ಬರಿ ಉತ್ಪಾದನಾ ವೆಚ್ಚ ಕ್ವಿಂಟಾಲಿಗೆ 18,800 ರೂ. ಎಂದು ವರದಿ ನೀಡಿದೆ. ಆದಾಗ್ಯೂ ಎಂಎಸ್​ಪಿ ಬೆಲೆ ನಿಗದಿ ಪಡಿಸುವಲ್ಲಿ ತಾರತಮ್ಯ ತೋರುತ್ತಿರುವ ಕೇಂದ್ರವನ್ನು ಶಿಫಾರಸು ಮಾಡಿರುವ ರಾಜ್ಯದ ಅಧಿಕಾರಿಗಳಾಗಲೀ, ಆಳುವವರಾಗಲೀ ಪ್ರಶ್ನಿಸುತ್ತಿಲ್ಲ ಎಂದರು.

ಬೆಲೆ ಕಾವಲು ಸಮಿತಿಯ ಕೆಳಹಟ್ಟಿ ಶ್ರೀಕಾಂತ್​ ಮಾತನಾಡಿ, ಕೇರಳ ರಾಜ್ಯದಲ್ಲಿ 3 ತಿಂಗಳಲ್ಲಿ ನೀರು ಇಂಗಿದ ಕಾಯಿ ಹೋಳು ಮಾಡಿ, ಯಂತ್ರದಲ್ಲಿ ಬಿಸಿ ಮಾಡಿ ಮಿಲ್ಲಿಂಗ್​ ಕೊಬ್ಬರಿಯಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ ತೆಂಗಿನ ಮರಗಳು ಯಾವುದೇ ಆರೈಕೆ ಇಲ್ಲದೆ ಪ್ರಕೃತಿದತ್ತವಾಗಿ ಬೆಳೆಯುತ್ತವೆ. ಈ ಲೆಕ್ಕದಲ್ಲಿ ಕೇರಳಿಗರಿಗೆ ಕ್ವಿಂಟಾಲ್​ ಮಿಲ್ಲಿಂಗ್​ ಕೊಬ್ಬರಿಗೆ ನಿಗದಿಪಡಿಸಿರುವ 12 ಸಾವಿರ ಖುಷಿಯ ವಿಚಾರ. ಆದರೆ ನಮ್ಮ ರಾಜ್ಯದಲ್ಲಿ ತೆಂಗು ಉತ್ಪನ್ನ ಇದಕ್ಕೆ ತದ್ವಿರುದ್ಧವಾಗಿದ್ದು, ಉತ್ಪಾದನಾ ವೆಚ್ಚವೇ 12,800 ರೂ. ಎಂದು ತೋಟಗಾರಿಕೆ ಇಲಾಖೆ ವರದಿ ನೀಡಿದ್ದರೂ ಕೇಂದ್ರ ಒಪ್ಪದಿರುವುದು ವಿಪರ್ಯಾಸ ಎಂದರು.

ರೈತ ಮುಖಂಡ ಜಯಚಂದ್ರಶರ್ಮ ಮಾತನಾಡಿ, ಕೊಬ್ಬರಿ ಉತ್ಪಾದನಾ ವೆಚ್ಚ ಶೇ.25 ರಿಂದ 30 ಹೆಚ್ಚಾಗಿದ್ದರೂ ಉತ್ಪಾದನಾ ವೆಚ್ಚ ಶೇ.1 ಮಾತ್ರ ಹೆಚ್ಚಾಗಿದೆ ಎನ್ನುತ್ತಿರುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸುವವರು ಬೇಕಾಗಿದ್ದಾರೆ. ಅಲ್ಲಿವರೆಗೂ ತಾರತಮ್ಯ ನೀತಿ ತಪ್ಪಲ್ಲ ಎಂದರು. ಇದಕ್ಕೂ ಮುಂಚೆ ತಾಲೂಕಿನ ಬಿಳಿಗೆರೆ ಪಾಳ್ಯದ ರೈತ ಬಿ.ನಾಗೇಶ್​ ಅವರ ತೆಂಗಿನ ತೋಟಕ್ಕೆ ಭೇಟಿ ನೀಡಿದ್ದ ಕೇಂದ್ರದ ನಿಯೋಗ, ತೆಂಗಿನ ಮರದಿಂದ ಕಾಯಿ ಕೀಳಲು. ಕಿತ್ತ ಕಾಯನ್ನು ಅಟ್ಟಕ್ಕೆ ಹಾಕಲು ಮತ್ತು ಅಟ್ಟದಿಂದ ಇಳಿಸಿ ಕಾಯಿ ಸುಲಿದು, ಕೊಬ್ಬರಿ ಬೇರ್ಪಡಿಸಿ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ತರುವವರೆಗೂ ತಗಲುವ ಒಟ್ಟಾರೆ ವೆಚ್ಚದ ಮಾಹಿತಿಯನ್ನು ಅಲ್ಲಿನ ರೈತರಿಂದ ಕಲೆ ಹಾಕಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿತು.

ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ತಹಸೀಲ್ದಾರ್​ ಮನೋಹರ್​, ಕೇಂದ್ರದ ಸಿಎಸಿಪಿ ನಿಯೋಗದ ಮುಖ್ಯಸ್ಥ ಡಾ.ಪ್ರೇಮ್​ಚಂದ್ರ, ಬಿಪಿನ್​, ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್​, ಕರಣ್​ ಇದ್ದರು.