ಅರಕಲಗೂಡು: ಜನಸೇವೆ ನೆಪದಲ್ಲಿ ಭ್ರಷ್ಟರು ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಲು ರಾಜಕೀಯ ಪ್ರವೇಶಿಸಿದ್ದು ಇಂಥವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಶಾಸಕ ಎ.ಮಂಜು ಹೇಳಿದರು.
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುವುದಿಲ್ಲ ಎಂದರು. ಅಂತ ಸಮಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನಗೆ ಪಕ್ಷದಲ್ಲಿ ಅವಕಾಶ ಮಾಡಿಕೊಟ್ಟರು. ಇಲ್ಲಿ ಜೆಡಿಎಸ್, ಮಡಿಕೇರಿ ಕ್ಷೇತ್ರದಲ್ಲಿ ಮಗ ಕಾಂಗ್ರೆಸ್ ಅಭ್ಯರ್ಥಿ ಎಂದು ವಿರೋಧಿಗಳು ಮಾಡುತ್ತಿದ್ದ ಆರೋಪಗಳನ್ನು ಲೆಕ್ಕಿಸದೆ ಮತದಾರರು ಎರಡೂ ಕಡೆ ನಮಗೆ ಆಶೀರ್ವಾದ ಮಾಡಿದರು. ಇವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನನ್ನ ಆಡಳಿತ ಅವಧಿಯಲ್ಲಿ ಹಿಂದೆ ಮಂಜೂರಾಗಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರ ಕಾಲದಲ್ಲಿ ಮಂಜೂರಾಗಿರುವ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಮಾಜಿ ಶಾಸಕರಂತೆ ತಾರತಮ್ಯ ಮಾಡುವುದಿಲ್ಲ. ಮಲ್ಲಿಪಟ್ಟಣ, ರಂಗೇನಹಳ್ಳಿ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು. ಸಾಲಗೇರಿ ರಸ್ತೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಬೆಮ್ಮತ್ತಿ ಸುರೇಶ್, ನರಸೇಗೌಡ, ಕೀರ್ತಿರಾಜ್, ಎಂ.ಆರ್.ಮಂಜುನಾಥ್ ಇತರರಿದ್ದರು.