ಜಿಲ್ಲೆ

ತಾಯ್ತನದ ಅಂತಃಕರಣಕ್ಕೆ ಮನುಕುಲ ರಕ್ಷಿಸುವ ಶಕ್ತಿಯಿದೆ:  ಲೇಖಕಿ ಡಾ.ಎಂ.ಎಸ್.ಆಶಾದೇವಿ

ಮೈಸೂರು: ಈಗ ಇಡೀ ನಾಗರಿಕತೆ ತಾತ್ವಿಕವಾದ ಅರಾಜಕತೆ ಎದುರಿಸುತ್ತಿದೆ ಎಂದು ಲೇಖಕಿ, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಹೇಳಿದರು.

ಮಾಲಗತ್ತಿ ದಶಬಲ ಟ್ರಸ್ಟ್, ರೈಟರ್ಸ್‌ ಅಕಾಡೆಮಿ, ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ನಗರದ ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ರಚಿತ ‘ಖಡಕಾವ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೀಗ ಹಿಂಸೆ ಹಿಂದೆಂದಿಗಿಂತಲೂ ವಿಜೃಂಭಿಸುತ್ತಿದೆ. ಈ ಹಿಂಸೆಯಿಂದ ಮಾನವ ಕುಲವನ್ನು ಪಾರು ಮಾಡುವ ಭವ ಸ್ಥಿತಿ ಶೋಧದಲ್ಲಿ ಈ ಜಗತ್ತು ಇದೆ. ಹಿಂಸಾತಾತ್ಮಕ ಮನಸ್ಥಿತಿಯಲ್ಲಿ ಮನುಕುಲವನ್ನು ಕಾಪಾಡುವ ಶಕ್ತಿ ತಾಯ್ತನದ ಅಂತಃಕರಣಕ್ಕೆ ಇದೆ. ಆದ್ದರಿಂದ ತಾಯ್ತನ ಅಂತಃಕರಣವನ್ನು ಮುನ್ನಲೆಗೆ ತರಬೇಕು.

ಈ ತಾಯ್ತನವನ್ನು ಅರವಿಂದ ಮಾಲಗತ್ತಿ ಅವರ ‘ಯವ್ವ ತಾಯವ್ವ ಮಾತೆ ಮಹಾ ಗೀತೆ’ ಕೃತಿ ಎತ್ತಿ ಹಿಡಿಯುತ್ತಿದೆ ಎಂದು ಹೇಳಿದರು.

ತಾತ್ವಿಕ ಅರಾಜಕತೆಯನ್ನು ಮೀರಬಲ್ಲ ಶಕ್ತಿ ಸ್ತ್ರೀವಾದಕ್ಕೆ ಇದೆ. ಸ್ತ್ರೀವಾದವೇ ಸರ್ವಕಾಲಿಕ ತಾತ್ವಿಕ ಆಯ್ಕೆಯಾಗಿದೆ. ಜಗತ್ತಿಗೆ ಬೇಡ ಎಂದರೂ ಇದುವೇ ಅನಿವಾರ್ಯ ಆಯ್ಕೆಯಾಗಿದೆ. ಈ ವಾದಕ್ಕೆ ಯಾವುದರ ಬಗ್ಗೆಯೂ ಆಕ್ಷೇಪ ಇಲ್ಲ. ದ್ವೇಷವಂತೂ ಇಲ್ಲವೇ ಇಲ್ಲ.

ಮಾನವೀಯತೆ ಸ್ಪರ್ಶದಿಂದ ಎಲ್ಲರನ್ನು ಒಳಗೊಳ್ಳಲು ಯತ್ನ ಪಡುತ್ತಿದೆ. ಗಂಡ್ವಾಳಿಕೆಯ ವಿರುದ್ಧ ನಡೆಸುತ್ತಿರುವ ಪ್ರಯತ್ನ ಹೊರತು ಗಂಡಿನ ವಿರುದ್ಧವಲ್ಲ ಎಂದು ಹೇಳಿದರು.

ರಾಜಕೀಯವಾಗಿ- ಸಾಂಸ್ಕೃತಿಯವಾಗಿ ಹೊಡೆಯುತ್ತಿರುವ ದುರ್ಭಿಕ್ಷಾ ಕಾಲ ಇದು. ಇಂತಹ ಸಂದರ್ಭದಲ್ಲಿ ಜಗತ್ತು ವಾಪಸ್ ಕಲಾ ಪ್ರಕಾರಗಳ ಕಡೆಗೆ ಮುಖಮಾಡಬೇಕಿದೆ. ಇದೀಗ ಕಲಾ ಪ್ರಕಾರಗಳನ್ನು ವೈದ್ಯರ ಪಾತ್ರದಲ್ಲಿ ನೋಡಬೇಕು ಜರೂರು ಈಗಿದೆ. ಮಾನಸಿಕ ವಿಕಾರದ ಕಾಲಘಟ್ಟದಲ್ಲಿ ಮನಸ್ಥಿತಿಯನ್ನು ಶುದ್ಧ ಮಾಡುವ ಮಾಂತ್ರಿಕ ಶಕ್ತಿ ಕಲಾ ಪ್ರಕಾರಕ್ಕೆ ಇದೆ ಎಂದು ಅಭಿಪ್ರಾಯಿಸಿದರು.

ಸಾಹಿತ್ಯ ಎಂಬುದು ದೊಡ್ಡ ಹುಚ್ಚು. ಆದರೆ, ಆ ಹುಚ್ಚು ಮನುಷ್ಯನೇ ಬೇಕು. ಏಕೆಂದರೆ ಅಸ್ವಸ್ಥಗೊಂಡ ಮನಸ್ಸನ್ನು ಶುದ್ಧಗೊಳಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ತನ್ನ ನೈತಿಕ ಹೊಣೆಗಾರಿಕೆ ಕಲೆ, ಸಾಹಿತ್ಯ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎಂದರು.

ತಾಯಿಯ ಕುರಿತು ನೂರಾರು ಪದ್ಯಗಳು ವಿವಿಧ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲೂ ಬಂದಿವೆ. ಇವು ತಾಯಿಯ ಕುರಿತು ಹೇಳುತ್ತ ಹೆಣ್ಣಿನ ಶಕ್ತಿಯನ್ನು ಎತ್ತಿ ಹಿಡಿದಿವೆ. ಆದರೆ, ಅರವಿಂದ ಮಾಲಗತ್ತಿ ಅವರ ಯವ್ವ ತಾಯವ್ವ ಮಾತೆ ಮಹಾಗೀತೆ ಇನ್ನೂ ವಿಸ್ತರವಾಗಿದೆ. ತಾಯಿ ಎಂದರೆ ಮೂಲ ಪ್ರಜ್ಞೆಯಾಗಿ, ವಿಶ್ವ ಪ್ರಜ್ಞೆಯ ನೆಲೆಯಾಗಿ ಪ್ರತಿಪಾದಿಸುತ್ತಿದೆ ಎಂದರು.

ಐಪಿಎಸ್ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಸಮಾನತೆ ಬದುಕಿಗೆ, ಶಾಂತಿಯಿಂದ ಜೀವನ ನಡೆಸಲು ಕವಿತೆಗಳು ಪ್ರೇರೆಪಿಸಬೇಕು. ಕವಿ ಬರೆದಂತೆ ಬಾಳಬೇಕು. ಇಲ್ಲವಾದರೆ ಕವಿತೆಗಳು ಮೌಲ್ಯಯುತವಾಗುವುದಿಲ್ಲ. ಸುಮ್ಮನ್ನೇ ವರ್ಣನೆ ಮಾಡುತ್ತ ಹೋದರೆ ಕಾವ್ಯ ಆಗಲ್ಲ. ವರ್ಣನೆ ಕಾವ್ಯವಾಗಿದ್ದರೆ ನೂರಾರು ಜನರು ಲೇಖಕರಾಗುತ್ತಿದ್ದರು ಎಂದರು.

ದಶಬಲ ಟ್ರಸ್ಟ್‌ನ ಉಪಾಧ್ಯಕ್ಷ ಡಾ.ಡಿ.ಕೆ.ರಾಜೇಂದ್ರ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಇದ್ದರು

ಬಳಿಕ ಕವಿ ಬಿ.ಆರ್.ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ ಕಾವ್ಯ ಢಮರುಗ ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ತಮ್ಮ ಕವನ ವಾಚಿಸಿದರು.