ಜಿಲ್ಲೆ

ತಾಯಿಯ ಹಾಲು ಅಮೃತಕ್ಕೆ ಸಮಾನ

ರಾಜಣ್ಣ

ಹೊಳೆನರಸೀಪುರ: ಮಗುವಿನ ದೇಹಕ್ಕೆ ಅಗತ್ಯವಾಗಿರುವ ಎಲ್ಲ ಶಕ್ತಿ ಹಾಗೂ ಪೋಷಕಾಂಶಗಳನ್ನು ಹೊಂದಿರುವ ಅಮೃತಕ್ಕೆ ಸಮಾನವಾದ ತಾಯಿಯ ಹಾಲು ಕುಡಿಸುವುದು ತಾಯಿಯ ಕರ್ತವ್ಯವಾಗಿದೆ ಎಂದು ಮಕ್ಕಳ ತಜ್ಞ ಡಾ.ಧನಶೇಖರ್ ಸಲಹೆ ನೀಡಿದರು.


ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ 2023ರ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿಹಾಲು ಶಿಶುಗಳಿಗೆ ಸುರಕ್ಷಿತ ಹಾಗೂ ಸ್ವಚ್ಛವಾಗಿರುವ ಆಹಾರವಾಗಿದೆ. ಜತೆಗೆ ಅನೇಕ ಸಾಮಾನ್ಯ ಬಾಲ್ಯದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಜತೆಗೆ ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಎಂದರು.


ಸ್ತನ್ಯಪಾನ ಮಾಡಿದ ಮಕ್ಕಳ ಬುದ್ಧಿಶಕ್ತಿ ಉತ್ತಮವಾಗಿರುತ್ತೆ. ಬೊಜ್ಜಿನ ಸಮಸ್ಯೆ ಕಡಿಮೆ ಹಾಗೂ ಮುಂದಿನ ದಿನಗಳಲ್ಲಿ ಡಯಾಬಿಟಿಸ್‌ನಂತಹ ಕಾಯಿಲೆ ಬರುವ ಸಾಧ್ಯತೆಯೂ ಅಲ್ಪವಾಗಿರುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್, ಬೊಜ್ಜಿನ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದರು.


ಡಾ.ರೇಖಾ, ಡಾ.ಭವ್ಯಾ, ಡಾ.ಲೋಕೇಶ್, ಶುಶ್ರೂಷಕರಾದ ದೇವಮ್ಮ, ನಾಗರತ್ನ, ಪಂಕಜಾ, ರಾಣಿ, ಆಶಾ, ಆರೋಗ್ಯ ನಿರೀಕ್ಷಕ ಜೆ.ಟಿ.ಸ್ವಾಮಿ ಇತರರು ಇದ್ದರು.