ಚಾಮರಾಜನಗರ: ತಾಯಿ ಹೆಸರಿನಲ್ಲಿ ಗಿಡ ನೆಡುವುದು ಶ್ರೇಷ್ಠ ಕಾರ್ಯ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ತರ್(ಮುನ್ನ) ಹೇಳಿದರು.
ನಗರದ ರೋಟರಿ ಭವನದಲ್ಲಿ ಮೇರಾ ಯುವ ಭಾರತ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಒಂದು ಗಿಡ ತಾಯಿಯ ಹೆಸರಿನಲ್ಲಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಿಯೇ ದೇವರು. ನಮ್ಮನ್ನು ಹೆತ್ತು, ಸಾಕಿದ ತಾಯಂದಿರ ಋಣ ತೀರಿಸಲು ಸಾಧ್ಯವಿಲ್ಲ. ಪರಿಸರವೂ ಕೂಡ ತಾಯಿ ಇದ್ದ ಹಾಗೆ. ಈ ನಿಟ್ಟಿನಲ್ಲಿ ತಾಯಿ ಹೆಸರಿನಲ್ಲಿ ಗಿಡ ನೆಡುವುದು ಉತ್ತಮ ಕಾರ್ಯವೆಂದು. ಮಕ್ಕಳು ದೊಡ್ಡವರಾಗುತ್ತಾ ತಾಯಿಯನ್ನು ಕಡೆಗಣಿಸುತ್ತಾರೆ. ಈ ರೀತಿ ಮಾಡಬಾರದು ಎಂದು ಹೇಳಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ದೇಶವನ್ನು ಭಾರತ ಮಾತೆ ಎಂದು ಕರೆಯುವ ಮೂಲಕ ತಾಯಿಗೆ ಶ್ರೇಷ್ಠ ಸ್ಥಾನ ನೀಡಿದ್ದೇವೆ. ಒಬ್ಬ ವಿದ್ಯಾರ್ಥಿ ಶಿಕ್ಷಣವಂತನಾಗಬೇಕಾದರೆ ತಾಯಿಯ ಪಾತ್ರ ದೊಡ್ಡದು. ಒಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಅದರಲ್ಲೂ ತಾಯಿ ಇರುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷನ ಶ್ರೇಯಸ್ಸನ್ನು ಬಯಸುವವಳು ತಾಯಿ. ತಾಯಿಯೊಬ್ಬಳು ವಿದ್ಯಾವಂತೆಯಾಗಿದ್ದರೆ ತನ್ನ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುತ್ತಾಳೆ ಎಂದರು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ತಾಯಿ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ವಿಚಾರ. ಹಬ್ಬಗಳು, ಜನ್ಮದಿನಗಳಲ್ಲಿ ಗಿಡ ನೆಡುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಛತ್ರಿ ವಿತರಣೆ ಮಾಡಿದರು. ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು, ವೇದಿಕೆಯ ಸದಸ್ಯೆಯರಾದ ನಿಹಾರಿಕಾ, ಐಶ್ವರ್ಯ, ಮೇರಾ ಯುವ ಭಾರತ್‌ನ ಸಹನಾ, ಶಿವಣ್ಣ ಹೊಸೂರು, ನಂದಿನಿ, ಕೆ.ಜಿ.ಸಿಂಧು, ಸುಧಾ, ನಾಗರತ್ನ, ಭಾಗ್ಯಲಕ್ಷ್ಮೀ, ಪೂಜಾ, ಪ್ರಕೃತಿ, ಭಾನುಪ್ರಿಯಾ, ಜ್ಯೋತಿ, ಅಶ್ವಿನಿ, ಜಯಾ, ಮೇಘನಾ ಇದ್ದರು.