ಎನ್.ಆರ್.ಪುರ: ಹುಟ್ಟಿದ ಮಗು ತಾಯಿ ಹಾಲಿನಿಂದ ವಂಚಿತರಾಗದಿರಲಿ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಗೌಡ ಹೇಳಿದರು.
ತಾಲೂಕು ಆರೋಗ್ಯ ಇಲಾಖೆಯಿಂದ ಆಡುವಳ್ಳಿ ಗ್ರಾಪಂನಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲ ತಾಯಂದಿರು ಮಕ್ಕಳಿಗೆ ಹಾಲು ಕುಡಿಸಿದರೆ ಸೌಂದರ್ಯ ಮಾಸುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಮಕ್ಕಳಿಗೆ ಹಾಲು ಕುಡಿಸುತ್ತಿಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಶಿಶು ಮರಣ ಸಂಭವಿಸುವ ಸಂಭವ ಜಾಸ್ತಿ ಆಗುತ್ತದೆ. ಮಕ್ಕಳಿಗೆ ತಾಯಿ ಹಾಲು ಶ್ರೇಷ್ಠ ಎಂದರು.
ಕಟ್ಟಿನಮನೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಮಾತನಾಡಿ, ತಾಯಿ ಹಾಲಿನ ಮಹತ್ವದ ಕುರಿತು ಗರ್ಭಿಣಿ ಮತ್ತು ಬಾಣಂತಿಯರಿಗೆ ಅರಿವು ಮೂಡಿಸಲಾಗುತ್ತಿದೆ. ಈ ವರ್ಷ ತಾಯಿಯ ಹಾಲಿನ ಮೇಲೆ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಭವಿಷ್ಯ ಮಾಡಿದಂತೆ ಎಂಬ ಘೋಷವಾಕ್ಯದೊಂದಿಗೆ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ. ಹುಟ್ಟಿದ ತಕ್ಷಣ ಮಕ್ಕಳಿಗೆ ತಾಯಿ ಹಾಲು ನೀಡುವುದರಿಂದ ಪ್ರಾರಂಭಿಸಿ ಆರು ತಿಂಗಳವರೆಗೆ ಕೇವಲ ತಾಯಿ ಹಾಲನ್ನು ನೀಡಬೇಕು. ಎರಡು ವರ್ಷವಾದರೂ ತಾಯಿ ಹಾಲನ್ನು ಕುಡಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ತಾಯಿ ಹಾಲು ಸ್ವಾಭಾವಿಕ ಲಸಿಕೆಯಾಗಿದ್ದು ಮಕ್ಕಳ ಸ್ವತ್ತು. ಮಕ್ಕಳ ಬೆಳವಣಿಗೆಗೆ ಬೇಕಾಗುವ ಎಲ್ಲ ಪೌಷ್ಟಿಕ ಅಂಶಗಳನ್ನು ಹೊಂದಿರುವ ಸಂಜೀವಿನಿ ಎಂದು ತಿಳಿಸಿದರು.
ವಿಜಯ ಬಾಲವಿಕಾಸ ಸಮಿತಿ ಅಧ್ಯಕ್ಷೆ ಅರ್ಪಿತಾ, ಕವಿತಾ, ಪೂರ್ಣಿಮಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಇದ್ದರು.