ಹಾಸನ: ತಾಯಿ ಮತ್ತು ಶಿಶು ಮರಣವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ, ಪ್ರತಿ ತಿಂಗಳಿನಲ್ಲಿ ಗರ್ಭಿಣಿರ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ತಿಳಿಸಿ. ಇದರಿಂದ ತಾಯಿ ಮರಣ ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಶು ಮರಣ ತಡೆಯಲು ಹೆಚ್ಚಿನ ಕ್ರಮಕೈಗೊಳ್ಳಿ, ಲಸಿಕಾ ಕಾರ್ಯಕ್ರಮದಡಿ ನಿಗದಿತ ಅವಧಿಯಲ್ಲಿ ಮಕ್ಕಳಿಗೆ ತಪ್ಪದಂತೆ ಲಸಿಕೆ ಹಾಕಿಸಬೇಕು. ಲಸಿಕೆ ನೀಡಿರುವ ಬಗ್ಗೆ ತಾಯಿ ಕಾರ್ಡ್‌ನಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವತೆಯಿಂದ ಕರ್ತವ್ಯ ನಿರ್ವಹಿಸಿ ಆರೋಗ್ಯದ ಎಲ್ಲಾ ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ ಮುಂಚೂಣಿಯಲ್ಲಿದ್ದು, ರಾಜ್ಯ ಮಟ್ಟದಲ್ಲಿ 5 ನೇ ಸ್ಥಾನದೊಳಗಿರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಕುರಿತು ನಿಗಾವಹಿಸಲು ಆಶಾ ಕಾರ್ಯಕರ್ತೆಯರು ತಿಳಿವಳಿಕೆ ನೀಡಿ ಮತ್ತು ಜಿಲ್ಲೆಯಲ್ಲಿ ಐ.ಇ.ಸಿ ಚಟುವಟಿಕೆಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ್, ಆರ್‌ಸಿಎಚ್ ಅಧಿಕಾರಿ ಡಾ ಚೇತನ್, ಹಿಮ್ಸ್ ಪ್ರಸೂತಿ ತಜ್ಞ ಡಾ.ಮಂಜುನಾಥ್, ಮಕ್ಕಳ ತಜ್ಞ ಡಾ.ಶ್ರೀನಿವಾಸ್, ಡಾ.ಕುಮಾರ್ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿ ಕಾರಿಗಳು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.