ಹಾಸನ: ತಾಯಿ ಮತ್ತು ಶಿಶು ಮರಣವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಎಸ್. ಅರ್ಚನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಬಿ.ಸಿ.ರಾಯ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಕಾರ್ಡ್‌ನಲ್ಲಿ ನಮೂದಿಸಿ ಮಹಿಳೆ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದರು.
ಪ್ರತಿ ತಿಂಗಳು ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಪತ್ತೆಗೆ ಪರೀಕ್ಷೆ ಮಾಡಿ ಅವರ ಆರೋಗ್ಯ ಸ್ಥಿತಿ ಬಗ್ಗೆ ತಿಳಿಹೇಳಬೇಕು. ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗರ್ಭಿಣಿಯರಿಗೆ ತಿಳಿಸಬೇಕು. ಇದರಿಂದ ತಾಯಿ ಮರಣ ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಶು ಮರಣ ತಡೆಯಲು ಹೆಚ್ಚಿನ ನಿಗಾ ವಹಿಸಿ ಕ್ರಮಕೈಗೊಳ್ಳಬೇಕು. ದಢಾರ - ರುಬೆಲ್ಲಾ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ 9ರಿಂದ 11 ತಿಂಗಳಲ್ಲಿ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ಭಾರತ ಸರ್ಕಾರವು ಡಿಸೆಂಬರ್ 2023ರ ಅಂತ್ಯಕ್ಕೆ ದಢಾರ - ರುಬೆಲ್ಲಾ ನಿರ್ಮೂಲನೆಗೆ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಮಗುವಿಗೂ ಲಸಿಕೆ ತಪ್ಪದಂತೆ ಹಾಕಲು ನಿಗಾ ವಹಿಸಬೇಕು. ಎರಡನೇ ಡೋಸ್ ಹಾಕಿಸಿದ್ದಾರೆ ಎಂಬುದನ್ನು ಆಶಾ ಕಾರ್ಯಕರ್ತೆಯರ ಮೂಲಕ ಖಾತರಿಪಡಿಸಿಕೊಳ್ಳಿ. ಲಸಿಕೆ ನೀಡಿರುವ ಬಗ್ಗೆ ತಾಯಿ ಕಾರ್ಡ್‌ನಲ್ಲಿ ನಮೂದಿಸಲಾ ಗಿದೆಯೇ ಎಂಬುದನ್ನು ಪರಿಶೀಲಿಸಿ. ಜಿಲ್ಲೆಗೆ ಕೆಲಸಕ್ಕಾಗಿ ವಲಸೆ ಬರುವ ಕುಟುಂಬದಲ್ಲಿರುವ ಮಕ್ಕಳಿಗೆ ಲಸಿಕೆ ಹಾಕಿಸಲು ಕಾರ್ಮಿಕ ಇಲಾಖೆ ಮುತುವರ್ಜಿ ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಆರ್‌ಸಿಎಚ್ ಅಧಿಕಾರಿ ಚೇತನ್, ಹಿಮ್ಸ್ ಪ್ರಸೂತಿ ತಜ್ಷ ಡಾ.ಮಂಜುನಾಥ್, ಮಕ್ಕಳ ತಜ್ಞ ಡಾ.ಶ್ರೀನಿವಾಸ್, ಡಾ.ಮನುಪ್ರಕಾಶ್ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.