ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾಗಿದ್ದ ಡಾ. ಜಯದೇವಿತಾಯಿ ಲಿಗಾಡೆ ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಕನ್ನಡಿಗರ ಕಣ್ಮಣಿ ಎಂದು ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗುರುವಾರ ಆಯೋಜಿಸಿದ್ದ ಡಾ. ಜಯದೇವಿತಾಯಿ ಲಿಗಾಡೆ ಅವರ 112ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಿಗಾಡೆಯವರು ಭಾರತದ ಸ್ವಾತಂತ್ರೃ ಹೋರಾಟ ಹಾಗೂ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಧೀಮಂತ ಮಹಿಳೆ. ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡದ ಗುಡಿ ಕಟ್ಟಿದವರು. ಕನ್ನಡಿಗರಾದ ನಮಗೆ ಅವರ ಜೀವನಾದರ್ಶಗಳು ಚೇತೋಹಾರಿಯಾಗಿವೆ. ಅವರ ಸಾಮಾಜಿಕ ಕಾರ್ಯಗಳು ಅವಿಸ್ಮರಣೀಯ ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಡಾ. ಜಯದೇವಿತಾಯಿ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ವೈಭವದ ಜೀವನ ನಡೆಸಲಿಲ್ಲ. ಗಾಂಧೀಜಿಯಿಂದ ಪ್ರಭಾವಿತರಾದ ಇವರು ತಮ್ಮ ಜೀವನದ ಕೊನೆಯವರೆಗೂ ನಿರಾಡಂಬರ ಜೀವನ ಸಾಗಿಸಿದರು. ಹೈದ್ರಾಬಾದ ರಜಾಕಾರರ ಹಾವಳಿಯಿಂದ ಸಹಸ್ರಾರು ಜನರು ನಿರಾಶ್ರಿತರಾದಾಗ ಆಶ್ರಯ ಕೊಟ್ಟು ರಕ್ಷಿಸಿದ ಮಹಾ ತಾಯಿ. ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು 200 ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಅಕ್ಷರದ ಅರಿವು ಮಾಡಿಕೊಟ್ಟರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ಮಾತನಾಡಿ, ಜಯದೇವಿತಾಯಿ ನಮಗೆಲ್ಲ ಪ್ರಾತಃ ಸ್ಮರಣೀಯರು. ನಾಡು, ನುಡಿಯ ಅಭಿಮಾನ ಅಗಾಧವಾಗಿತ್ತು. ಕನ್ನಡದ ಏಳ್ಗೆಗೆಗೆ ಅವಿಶ್ರಾಂತವಾಗಿ ದುಡಿದ ಆದರ್ಶ ಮಹಿಳೆ ಎಂದರು.
ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಬಸವಪ್ರಭು ಹೊಸಕೇರಿ, ಡಾ. ಧನವಂತ ಹಾಜವಗೋಳ, ಸದಾನಂದ ಶಿವಳ್ಳಿ, ಸಂಘದ ಸಿಬ್ಬಂದಿ, ಇತರರು ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.