ಕೆ.ಎಂ.ದೊಡ್ಡಿ: ಪತಿಯಿಂದ ತನ್ನ ಮಗುವನ್ನು ವಾಪಸ್ ಕೊಡಿಸಬೇಕು ಎಂದು ಮಡೇನಹಳ್ಳಿಯ ಮಹಿಳೆಯೊಬ್ಬರ ಮನವಿಗೆ ಸ್ಪಂದಿಸಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೊಲೀಸ್ ಅಧಿಕಾರಿಗಳು, ಧ್ವನಿ ಸಂಸ್ಥೆ ಮುಖ್ಯಸ್ಥರು ಮಗುವನ್ನು ತಾಯಿ ಮಡಿಲು ಸೇರಿಸಿದ್ದಾರೆ.
ಧ್ವನಿ ಸಂಸ್ಥೆಯ ಅಧ್ಯಕ್ಷೆ, ಮಹಿಳಾ ಹೋರಾಟಗಾರ್ತಿ ರಜನಿ ರಾಜ್ ಅವರಿಗೆ ಕರೆ ಮಾಡಿದ್ದ ಭವಾನಿ ಎಂಬುವರು ಪತಿ ಸುರೇಶ್ ಯಾವುದೋ ಕಾರಣಕ್ಕೆ ದೌರ್ಜನ್ಯ ಮಾಡಿ 6 ತಿಂಗಳ ಮಗುವನ್ನು ಕಸಿದುಕೊಂಡಿದ್ದು, ನೋಡಲು ಸಹ ಅವಕಾಶ ಕೊಡುತ್ತಿಲ್ಲ. ಮಗುವಿನ ಪಾಲನೆ, ಪೋಷಣೆ ಮಾಡಲು ಮಗುವನ್ನು ನನಗೆ ಕೊಡಿಸಬೇಕು ಎಂದು ಮನವಿ ಮಾಡಿದ್ದರು.
ಮಹಿಳೆ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮತ್ತು ಧ್ವನಿ ಸಂಸ್ಥೆ ಅಧ್ಯಕ್ಷೆ ರಜನಿ ರಾಜ್, ಮದ್ದೂರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತಾ ಅವರೊಂದಿಗೆ ಕೆ.ಎಂ.ದೊಡ್ಡಿ ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿ ಕುಟುಂಬಸ್ಥರೊಂದಿಗೆ ಚರ್ಚಿಸಿದರು. ಬಳಿಕ ಕಾನೂನು ಅರಿವು ಮೂಡಿಸಿ ಮಹಿಳೆಯ ಪತಿ ಸುರೇಶ್ ಮನವೊಲಿಸಿ ಮಗುವನ್ನು ತಾಯಿ ಮಡಿಲಿಗೆ ಸೇರಿಸಿದರು.